
ನಮ್ಮ ಮಕ್ಕಳು ನಮ್ಮ ಮನೆಯ, ರಾಷ್ಟ್ರದ, ಇಡೀ ಭೂಮಂಡಲದ ಆಸ್ತಿಯಾಗಬೇಕು: ಪ್ರೊ. ಗಣರಾಜ ಕುಂಬ್ಳೆ
Saturday, February 15, 2025
ಪುತ್ತೂರು: ಇಂದಿನ ಈ ತಂತ್ರಜ್ಞಾನದ ಜಗತ್ತಿನಲ್ಲಿ ತಂತ್ರಜ್ಞಾನವನ್ನು ಬೇಡ ಎನ್ನುವಂತಿಲ್ಲ. ಆದರೆ ತಂತ್ರಜ್ಞಾನವನ್ನು ಬಳಸುವ ರೀತಿಯ ಬಗ್ಗೆ ಸರಿಯಾದ ತಿಳುವಳಿಕೆಯನ್ನು ನೀಡಬೇಕು. ಮುಖ್ಯವಾಗಿ ಆತ್ಮಸಂಯಮದ ಅಗತ್ಯವಿದೆ. ತಂದೆ ತಾಯಿಯರು ತಮ್ಮ ನಡವಳಿಕೆಯ ಮಾದರಿಯನ್ನೇ ಮಕ್ಕಳ ಮುಂದಿಡಬೇಕು. ಹೆತ್ತವರು ಮಕ್ಕಳಿಗೆ ಸಲಹೆಯನ್ನು ಮಾತ್ರವೇ ಕೊಡುತ್ತಾ ಸ್ವತಂತ್ರ ಯೋಚನಾ ಶಕ್ತಿಯನ್ನು ಬೆಳೆಸುವುದಕ್ಕೆ ಪರಿಪೂರ್ಣ ಅವಕಾಶವನ್ನು ಒದಗಿಸಿ ಕೊಡಬೇಕು. ಅವರ ಸಾಧನೆಗಳನ್ನು ಗುರುತಿಸುವ ಮೂಲಕ ಅವರಿಗೆ ಪ್ರೋತ್ಸಾಹವನ್ನು ನೀಡಬೇಕು. ನಮ್ಮ ಮಕ್ಕಳು ನಮ್ಮ ಮನೆಯ ಆಸ್ತಿ. ಅವರು ರಾಷ್ಟ್ರದ ಆಸ್ತಿಯಾಗಬೇಕು, ಇಡೀ ಭೂಮಂಡಲದ ಆಸ್ತಿಯಾಗಬೇಕು ಎಂದು ಶ್ರೀ ರಾಮಕುಂಜೇಶ್ವರ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣರಾಜ ಕುಂಬ್ಳೆ ಹೇಳಿದರು.
ಅವರು ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ‘ಶಿಕ್ಷಣದಲ್ಲಿ ತಂತ್ರಜ್ಞಾನ-ಪೋಷಕರ ಪಾತ್ರ’ ಎಂಬ ವಿಷಯದ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ನೀಡಿದರು.
ಕಾಲೇಜಿನ ಸಂಚಾಲಕ ಅತೀ ವಂದನೀಯ ಲಾರೆನ್ಸ್ ಮಸ್ಕರೇನಸ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಖ್ಯವಾಗಿ ಇಂದಿನ ಮಕ್ಕಳು ತಂತ್ರಜ್ಞಾನವನ್ನು ಬಳಸುವ ಬಗ್ಗೆ ಅರಿವನ್ನು ಹೊಂದಿರಬೇಕು. ಮಕ್ಕಳು ತಪ್ಪು ದಾರಿಯನ್ನು ಹಿಡಿದಾಗ ಅವರನ್ನು ಸರಿದಾರಿಗೆ ತಂದು ಅವರ ಬದುಕನ್ನು ರೂಪಿಸುವ ಮಹತ್ತರ ಜವಾಬ್ದಾರಿ ಹೆತ್ತವರ ಪಾಲಿಗೆ ಇದೆ. ಜೊತೆಗೆ ಮಕ್ಕಳನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಳೆಯಲು ಪ್ರೋತ್ಸಾಹವನ್ನು ನೀಡಬೇಕು ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕರಾದ ವಾರಿಜಾ ಮತ್ತು ತಂಡ ಪ್ರಾರ್ಥಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯತೀಂದ್ರನಾಥ್ ರೈ ಪಿ.ಡಿ. ಸ್ವಾಗತಿಸಿದರು. ಪ್ರಾಂಶುಪಾಲ ಅತೀ ವಂದನೀಯ ಡಾ. ಆಂಟನಿ ಪ್ರಕಾಶ್ ಮೊಂತೇರೊ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರಶಾಂತ್ ರೈ ವರದಿಯನ್ನು ವಾಚಿಸಿದರು. ಖಜಾಂಚಿ ಪ್ರೇಮಲತಾ ಕೆ. ಆಯವ್ಯಯ ಪತ್ರ ಮಂಡಿಸಿದರು. ಸಹಾಯಕ ಪ್ರಾಂಶುಪಾಲ ಡಾ ವಿಜಯ್ ಕುಮಾರ್ ಮೊಳೆಯರವರು ವಂದಿಸಿದರು. ಡಾ. ರಾಧಾಕೃಷ್ಣ ಗೌಡ ನೂತನ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಿಕೊಟ್ಟರು. ಮಯಿ ದೇ ದೇವುಸ್ ಚರ್ಚ್, ಪಾಲನಾ ಸಮಿತಿಯನ ಉಪಾಧ್ಯಕ್ಷ ಜೆರಾಲ್ಡ್ ಡಿಕಾಸ್ಟ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಪೂಜಾಶ್ರೀ ವಿ. ರೈ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಚಂಡೆ ವಾದನ ಹಾಗೂ ಚಕ್ರತಾಳ ಎಲ್ಲರ ಗಮನ ಸೆಳೆಯಿತು.