
ಭಾಷೆ ಮತ್ತು ಬದುಕು ಬೇರೆ ಬೇರೆ ಅಲ್ಲ: ಡಾ. ಮೈತ್ರಿ ಭಟ್
Sunday, February 23, 2025
ಪುತ್ತೂರು: ‘ಭಾಷೆ ಮತ್ತು ಬದುಕು ಬೇರೆ ಬೇರೆ ಅಲ್ಲ. ಆಂತರಿಕ ಆಲೋಚನೆಯ ಬಾಹ್ಯ ಅಭಿವ್ಯಕ್ತಿಯೇ ಭಾಷೆ. ಇಂದು ಬಹುಭಾಷಾ ಕಲಿಕೆಗೆ ತಂತ್ರಜ್ಞಾನದ ಅಗತ್ಯತೆಯಿದೆ. ಭಾಷೆಯೇ ನಮ್ಮನ್ನು ಆಯ್ದುಕೊಂಡರೂ ನಾವೇ ಭಾಷೆಯನ್ನು ಆಯ್ದುಕೊಂಡರೂ ಬದುಕಿನ ಭಾಗವಾಗದ ಹೊರತು ಯಾವ ಭಾಷೆಯೂ ನಮ್ಮದಾಗುವುದಿಲ್ಲ’ ಎಂದು ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಮೈತ್ರಿ ಭಟ್ ಹೇಳಿದರು.
ಅವರು ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ವಿಶ್ವ ಮಾತೃಭಾಷಾ ದಿನದ ಆಚರಣೆಯ ಅಂಗವಾಗಿ ‘ಮಾತೃಭಾಷೆಯ ಮೂಲಕ ಪ್ರತಿಭೆ ಮತ್ತು ಸಾಮರ್ಥ್ಯಗಳ ಸಮಗ್ರ ಅಭಿವೃದ್ಧಿ’ ಎಂಬ ಧ್ಯೇಯದ ಹಿನ್ನೆಲೆಯಲ್ಲಿ ಮಾತೃಭಾಷಾ ದಿನಾಚರಣೆಯಲ್ಲಿ ಅತಿಥಿ ಉಪನ್ಯಾಸವನ್ನು ನೀಡಿದರು.
‘ನಾಡು ನುಡಿಯನ್ನು ಪ್ರೀತಿಸಬೇಕು. ಆದರೆ ವೈಯಕ್ತಿಕ ಸ್ವಾರ್ಥಿದಿಂದ ಅಲ್ಲ. ಭಾಷೆ ನಮಗೇನು ಕೊಟ್ಟಿದೆ ಎಂದು ಯೋಚಿಸುವ ಬದಲು ನಾವು ಭಾಷೆಗೇನು ಕೊಟ್ಟಿದ್ದೇವೆ ಎಂಬುದನ್ನು ಆಲೋಚಿಸಬೇಕಿದೆ’ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಹೇಳಿದರು.
ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ ಸ್ವಾಗತಿಸಿದರು. ಯಕ್ಷಕಲಾ ಕೇಂದ್ರದ ನಿರ್ದೇಶಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ಸಮೂಹ ಗಾಯನವನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ನಾಡು-ನುಡಿಯ ಬಗ್ಗೆ ಸಮೂಹ ಗಾಯನ ಸ್ಪರ್ಧೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಪ್ರಶಾಂತಿ ಎನ್., ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ಶಿವಾನಿ ಮಲ್ಯ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.