
ಸಂತ ಫಿಲೋಮಿನಾ ಕಾಲೇಜಿನಲ್ಲಿ ಓಪ್ಟಮ್ ಕಂಪನಿಯಿಂದ ಕ್ಯಾಂಪಸ್ ನೇಮಕಾತಿ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ ಯುನೈಟೆಡ್ ಸ್ಟೇಟ್ಸ್ ಮೂಲದ ಬಹುರಾಷ್ಟ್ರೀಯ ಹೆಲ್ತ್‌ಕೇರ್ ಮತ್ತು ಇನ್ಶೂರೆನ್ಸ್ ಕಂಪನಿ ಓಪ್ಟಮ್‌ನ ಮೆಡಿಕಲ್ ಕೋಡರ್ ಹುದ್ದೆಗಳಿಗಾಗಿ ಫೆ.28 ರಂದು ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮ ನಡೆಯಲಿದೆ.
ಓಪ್ಟಮ್ ಕಂಪನಿಯು 1,25,000ಕ್ಕೂ ಹೆಚ್ಚು ಉದ್ಯೋಗಿಗಳಿರುವ ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಪ್ರಸ್ತುತ ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಆವಶ್ಯಕತೆಯಿದ್ದು ಬದ್ಧತೆ ಹಾಗೂ ಉತ್ಸಾಹಹೊಂದಿರುವ ಅರ್ಹ ಪದವೀಧರರನ್ನು ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮದ ಮೂಲಕ ನೇಮಕ ಮಾಡುವ ಗುರಿಯನ್ನು ಹೊಂದಿದೆ.
ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ 5 ವಾರಗಳ ಕಡ್ಡಾಯ ತರಬೇತಿ ಕಾರ್ಯಕ್ರಮವನ್ನು ಕಂಪನಿಯ ವತಿಯಿಂದ ಆಯೋಜಿಸಲಾಗುತ್ತದೆ. 2024ರಲ್ಲಿ ಅಥವಾ ಹಿಂದಿನ ವರ್ಷಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಈ ಹಿಂದೆ 3 ಬಾರಿ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ನಡೆಸಿದ್ದು ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿರುತ್ತಾರೆ. ಆಸಕ್ತರು ಸದರಿ ಕಾರ್ಯಕ್ರಮದ ಸದುಪಯೋಗ ಪಡೆಯಬಹುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.