
ಬ್ಯಾಂಡೇಜಿನ ಬಟ್ಟೆಯನ್ನು ಉದರದಲ್ಲೇ ಬಿಟ್ಟ ವೈದ್ಯರು
ಪುತ್ತೂರು: ಸಿಸೇರಿಯನ್ ಹೆರಿಗೆ ನಡೆಸಿದ ಬಳಿಕ ವೈದ್ಯರು ಬ್ಯಾಂಡೇಜಿನ ಬಟ್ಟೆಯ ತುಂಡೊಂದನ್ನು ಗರ್ಭಿಣಿ ಮಹಿಳೆಯ ಉದರದಲ್ಲೇ ಬಿಟ್ಟು ಹೊಲಿಗೆ ಹಾಕಿದ ಬೆಚ್ಚಿ ಬೀಳಿಸುವ ಪ್ರಕರಣವೊಂದು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪುತ್ತೂರಿನ ಆರ್ಯಾಪಿನ ಮಹಿಳೆಯೊಬ್ಬರು ಕಳೆದ ವರ್ಷದ ನವೆಂಬರ್ 27ರಂದು ಹೆರಿಗೆಗಾಗಿ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಮೂವರು ವೈದ್ಯರು ಯಶಸ್ವಿ ಸಿಸೇರಿಯನ್ ಹೆರಿಗೆ ನಡೆಸಿದ ಬಳಿಕ ಅಂದರೆ ಡಿ.2ರಂದು ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಮಹಿಳೆಗೆ ಹೊಟ್ಟೆಯಲ್ಲಿ ಪದೇ ಪದೇ ನೋವು, ಜ್ವರ ಕಾಣಿಸಿಕೊಳ್ಳಲಾರಂಭಿಸಿತು. ಸ್ವಲ್ಪ ದಿನದಲ್ಲಿ ಕೈಕಾಲು ನೋವು ಉಂಟಾಯಿತು. ಈ ಹಿನ್ನಲೆಯಲ್ಲಿ ಮಹಿಳೆಯ ಪತಿ ತನ್ನ ಬಾಣಂತಿ ಪತ್ನಿಯನ್ನು ಕರೆದುಕೊಂಡು ಸಿಸೇರಿಯನ್ ನಡೆಸಿದ ವೈದ್ಯರನ್ನು ಸಂಪರ್ಕಿಸಿದರು. ಅವರು ಮಹಿಳೆಯ ಹೊಟ್ಟೆಯ ಸ್ಕ್ರೀನ್ ಮಾಡುವಂತೆ ತಿಳಿಸಿದರು.
ಅಂತೆಯೇ, ಅವರು ಡಿ.19ರಂದು ಮಹಿಳೆಯ ಹೊಟ್ಟೆಯನ್ನು ಸ್ಕ್ರೀನ್ ಮಾಡಿಸಿದರು. ಈ ಸ್ಕ್ರೀನಿಂಗ್ ವರದಿ ನೋಡಿದ ವೈದ್ಯರೇ ಒಂದು ಕ್ಷಣ ದಂಗಾಗಿ ಹೋದರು. ಯಾಕೆಂದರೆ ಆ ಮಹಿಳೆಯ ಉದರಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಬ್ಯಾಂಡೇಜ್ ಬಟ್ಟೆ ಹೊಟ್ಟೆಯಲ್ಲೇ ಉಳಿಸಿಕೊಂಡು ಹೊಲಿಗೆ ಹಾಕಲಾಗಿತ್ತು. ಇದರಿಂದ ಭಯಭೀತರಾದ ವೈದ್ಯರ ತಂಡ ಮತ್ತೆ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಹೊಟ್ಟೆಯಲ್ಲಿ ಉಳಿದುಕೊಂಡಿದ್ದ ಬ್ಯಾಂಡೇಜ್ ಬಟ್ಟೆಯನ್ನು ಹೊರ ತೆಗೆದು ಹೊಲಿಗೆ ಹಾಕಿ ಮನೆಗೆ ಕಳುಹಿಸಿ ಕೈ ತೊಳೆದುಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯಾಗಲಿ, ಮಹಿಳೆಯ ಪತಿಯಾಗಲಿ, ಮನೆಯವರಾಗಲಿ ದೂರು ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.