
ಸರಕಾರಕ್ಕೆ ಇಚ್ಚಾಶಕ್ತಿ ಇದ್ದರೆ ದ.ಕ. ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲಿ: ವಿಜಯ್ ಕುಮಾರ್
Saturday, February 22, 2025
ಮಂಗಳೂರು: ನಮ್ಮನ್ನಾಳುವ ಸರಕಾರಗಳಿಗೆ, ಶಾಸಕ, ಸಂಸದರುಗಳಿಗೆ ಇಚ್ಚಾಶಕ್ತಿ ಇರುತ್ತಿದ್ದರೆ ಕನಿಷ್ಟ ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಸರ್ಕಾರಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜು ಇರುತ್ತಿತ್ತು ಎಂದು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಒತ್ತಾಯಿಸಿದರು.
ಅವರು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ), ಸರ್ವ ಕಾಲೇಜು ವಿದ್ಯಾರ್ಥಿಗಳ ಸಮನ್ವಯ ಸಮಿತಿ, ಸರ್ವ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಇಂದು ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ಬಳಿ ಇರುವ ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕಾಶಿಯಾಗಿರುವ ದ.ಕ. ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಕಾಲೇಜು ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದೆ. ಸರಕಾರ ವಿದ್ಯಾರ್ಥಿಗಳಿಲ್ಲ ಎಂಬ ನೆಪ ನೀಡಿ ಮುಚ್ಚುವ ತೀರ್ಮಾನ ಕೈಗೊಳ್ಳುತ್ತಿರುವುದು ದುರಂತ. ಇಲ್ಲೊಂದು ಕನಿಷ್ಟ ಸರಕಾರಿ ಮೆಡಿಕಲ್ ಕಾಲೇಜು ಇರುತ್ತಿದ್ದರೆ ಸರಕಾರಿ ಜಿಲ್ಲಾಸ್ಪತ್ರೆಗಳಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಗಳನ್ನು ನೀಗಿಸುತ್ತಿತ್ತು. ಸರಕಾರ ಪ್ರತೀ ಜಿಲ್ಲೆಯಲ್ಲೊಂದು ಸರ್ಕಾರಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಮುಂದಾಗಬೇಕು. ದ.ಕ ಜಿಲ್ಲೆಯಲ್ಲಿ ಪ್ರತೀ ವರುಷ ಬೇರೆ ಬೇರೆ ಪದವಿಗಳನ್ನು ಪಡೆದು ಹೊರಬರುತ್ತಿರುವ ವಿದ್ಯಾರ್ಥಿಗಳಿಗೆ ಸರಿಯಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕ್ರಮಕೈಗೊಳ್ಳುವಂತಾಗಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಎಸ್‌ಎಫ್‌ಐ ಮಾಜಿ ಮುಖಂಡ ಸಂತೋಷ್ ಬಜಾಲ್ ಮಾತನಾಡಿ, ಕಾಲೇಜುಗಳಲ್ಲಿ ಧರ್ಮದ ಹೆಸರಿನಲ್ಲಿ ಮತೀಯವಾದವನ್ನು ಹುಟ್ಟಿಸಲಾಗುತ್ತಿದೆ. ಆದರೆ ಶುಲ್ಕ ಹೆಚ್ಚಳ, ಅತಿಥಿ ಶಿಕ್ಷಕರ ಸಮಸ್ಯೆ, ಮೂಲಭೂತ ಸೌಕರ್ಯ ಸಮಸ್ಯೆ ಬಗ್ಗೆ ಯಾವೊಂದು ವಿದ್ಯಾರ್ಥಿ ಸಂಘಟನೆಗಳು ಧ್ವನಿ ಎತ್ತುವುದಿಲ್ಲ. ಇವತ್ತಿನ ಕಾಲದ ವಿದ್ಯಾರ್ಥಿಗಳು ಸಂಪೂರ್ಣ ದಾರಿ ತಪ್ಪುತ್ತಿದ್ದು ಗಾಂಜಾ ಅಫೀಮಿನಂತಹ ನಿಷೇದಿತ ಮಾದಕ ವಸ್ತುಗಳಿಗೆ ಬಲಿಯಾದರೆ ಇನ್ನು ಕೆಲವು ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಕ್ರಮಿನಲ್ ಗಳಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ ಇನ್ನು ಉಳಿದ ಆತ್ಮಹತ್ಯೆಹಂತಹ ದಾರಿಗಳನ್ನು ತುಳಿಯುತ್ತಿದ್ದಾರೆ. ಎನ್‌ಸಿಆರ್‌ಬಿ ವರದಿ ಪ್ರಕಾರ ಪ್ರತಿ 52 ನಿಮಿಷಕ್ಕೆ ಒಂದು ವಿದ್ಯಾರ್ಥಿಗಳು ಶಿಕ್ಷಣದ ಒತ್ತಡಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದೇ ವರದಿ ಪ್ರತೀ ಗಂಟೆಗೆ ಎರಡು ಯುವಜನರು ನಿರುದ್ಯೋಗದ ಪ್ರಶ್ನೆಗೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆಂಬ ವರದಿಗಳು ಬೆಚ್ಚಿ ಬೀಳಿಸುತ್ತಿದೆ. ಹಾಗಾಗಿ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ನಾವು ಧ್ವನಿ ಎತ್ತ ಬೇಕಾಗಿದೆ ಎಂದರು.
ಸಮಾವೇಶದಲ್ಲಿ ಎಸ್‌ಎಫ್‌ಐ ನೂತನ ಸಮಿತಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇನಾಝ್ ಬಿಕೆ, ಕಾರ್ಯದರ್ಶಿಯಾಗಿ ವಿನುಶಾ ರಮಣ ಆಯ್ಕೆಯಾದರು.
ಸಮಾವೇಶದ ಅಧ್ಯಕ್ಷತೆಯನ್ನು ವಿನುಶಾ ರಮಣ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ತಿಲಕ್ ರಾಜ್ ಕುತ್ತಾರ್, ಸರ್ವ ಕಾಲೇಜು ವಿದ್ಯಾರ್ಥಿಗಳ ಸಮನ್ವಯ ಸಮಿತಿಯ ಉಪಾಧ್ಯಕ್ಷೆ ನಿರೀಕ್ಷಿತಾ, ಸರ್ವ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮುಸ್ಕಾನ್, ಎಸ್‌ಎಫ್‌ಐ ಮುಖಂಡರುಗಳಾದ ಶಿವಾನಿ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು.
ಎಸ್‌ಎಫ್‌ಐನ ಜಿಲ್ಲಾ ಮುಖಂಡ ಕೋಶ್ ಸ್ವಾಗತಿಸಿದರು. ರೇವಂತ್ ಕದ್ರಿ ನಿರೂಪಿಸಿ, ತಿಲಕ್ ರಾಜ್ ವಂದಿಸಿದರು.