
ಬಿಜೆಪಿಯ ‘ನವಹಿಂದುತ್ವ’ದಿಂದ ಅಪಾಯ: ಎಂ.ಜಿ. ಹೆಗ್ಡೆ
ಪುತ್ತೂರು: ಧ್ವೇಷ ಸಾಧನೆಯ ಬಿಜೆಪಿ ನವ ಹಿಂದುತ್ವವನ್ನು ಹೀಗೆ ಬೆಳೆಯಲು ಬಿಟ್ಟರೆ ನೈಜ ಹಿಂದುತ್ವ ಸಂಪೂರ್ಣವಾಗಿ ನಾಶವಾಗಲಿದೆ. ರಾಜಕಾರಣಕ್ಕಾಗಿ ಕಾಂಗ್ರೇಸನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಮೂಲಕ ಅಧಿಕಾರಕ್ಕಾಗಿ ಹಿಂದುತ್ವದ ಬಳಕೆ ಮಾಡುತ್ತಿರುವ ಬಿಜೆಪಿಯಿಂದ ವೇದ-ಉಪನಿಷತ್ ಗಳೂ ನಾಶವಾಗುತ್ತವೆ. ಈ ಬಗ್ಗೆ ಎಚ್ಚರಿಕೆ ಇರಲಿ ಎಂದು ಕಾಂಗ್ರೆಸ್ ಮುಖಂಡ ಎಂ.ಜಿ. ಹೆಗ್ಡೆ ಹೇಳಿದರು.
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಅಭಿವೃದ್ಧಿ ಕಾರ್ಯಕ್ಕೆ ತಡೆಯೊಡ್ಡುತ್ತಿರುವ ಹಾಗೂ ಶಾಸಕ ಅಶೋಕ್‌ಕಮಾರ್ ರೈ ಅವರ ಬಗ್ಗೆ ಕೆಟ್ಟ ಪದಗಳಿಂದ ನಿಂದಿಸಿರುವ ನಕಲಿ ಹಿಂದುತ್ವದ ಬಿಜೆಪಿಗರ ಕ್ರಮವನ್ನು ವಿರೋಧಿಸಿ ಶುಕ್ರವಾರ ನಗರದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ದೇವಳದ ಅಭಿವೃದ್ಧಿಯಿಂದ ಕಾಂಗ್ರೇಸ್ ನ್ನು ದೂರ ಇಡುವುದೇ ಬಿಜೆಪಿಯ ಸಂಕಲ್ಪ. ಹಿಂದುತ್ವದ ಬಗ್ಗೆ ಮಾತನಾಡುತ್ತಿರುವವರು, ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಪಡೆದುಕೊಂಡವರು ದೇವಳದ ಅಭಿವೃದ್ಧಿಗಾಗಿ ದೇವಳದ ಜಾಗವನ್ನು ಬಿಟ್ಟು ಕೊಡಬೇಕಾಗಿತ್ತು. ದುಡ್ಡು, ಸೈಟು ಕೊಡುತ್ತೇವೆ ಎಂದು ಹೇಳಿದ್ದರೂ ದೇವಳಕ್ಕೆ ಜಾಗ ಬಿಟ್ಟು ಕೊಟ್ಟಿಲ್ಲ ಎಂದಾದರೆ ಇದೆಂಥ ಹಿಂದುತ್ವ ಎಂದು ಪ್ರಶ್ನಿಸಿದ ಅವರು, ದೇವಳದ ಅಭಿವೃದ್ಧಿಗೆ ಕಾಂಗ್ರೆಸಿಗರು ಹೋಗುವುದನ್ನು ಬಿಜೆಪಿಗರು ಒಪ್ಪುವುದಿಲ್ಲ. ಕಾಂಗ್ರೆಸಿಗರು ಈ ಕೆಲಸವನ್ನು ಮಾಡಿದರೆ ಅವರಿಗೆ ಎಂಥದ್ದೂ ಇಲ್ಲದಾಗುತ್ತದೆ. ಅವರ ಊಟ, ವ್ಯವಹಾರವೇ ಹಿಂದುತ್ವ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿ, ದೇವಳದ ಹೆಸರಿನಲ್ಲಿ ಗೊಂದಲ ಎಬ್ಬಿಸಿ ಲಾಭ ಪಡೆಯಲು ಬಿಜೆಪಿಗರು ಷಡ್ಯಂತ್ರ, ಪಿತೂರಿಯ ರಾಜಕಾರಣ ಮಾಡುತ್ತಿದ್ದಾರೆ. ಶಾಸಕರು ದೇವಳವನ್ನು ಅಭಿವೃದ್ಧಿಗೊಳಿಸಿ ಪ್ರವಾಸಿ ಕೇಂದ್ರವನ್ನಾಗಿಸುವ ಪ್ರಯತ್ನ ಮಾಡುತ್ತಿದ್ದರೆ, ಇಲ್ಲಿ ಬಿಜೆಪಿಗರಿಂದ ದೇವರಿಗೇ ಮೋಸ ಮಾಡುವ ಕೆಲಸ ಆಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಮಾತನಾಡಿ, ದೇವಳದ ಅಭಿವೃದ್ಧಿಗಾಗಿ ದೇವಳದ ಜಾಗವನ್ನು ಬಿಟ್ಟು ಕೊಡದ ನಕಲಿ ಬಿಜೆಪಿಗರು ದೇವಳದ ವ್ಯವಸ್ಥಾಪನಾ ಸಮಿತಿಯ ವಿರುದ್ಧವೇ ಸುಳ್ಳು ದೂರು ನೀಡಿದ್ದಾರೆ. ದೇವಳದ ಅಭಿವೃದ್ಧಿಗೆ ಪಣತೊಟ್ಟಿರುವ ಶಾಸಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಕ್ಷಮೆಯಾಚಿಸಿ ದೇವಳದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪಕ್ಷದ ಮುಖಂಡರಾದ ರವೀಂದ್ರ ರೈ ನೆಕ್ಕಿಲು, ಅನಿತಾ ಹೇಮನಾಥ ಶೆಟ್ಟಿ, ಉಲ್ಲಾಸ್ ಕೋಟ್ಯಾನ್, ಬೂಡಿಯಾರ್ ಪುರುಷೋತ್ತಮ ರೈ, ರಮೇಶ್ ರೈ ಡಿಂಬ್ರಿ, ಬಾಬು ಶೆಟ್ಟಿ ನರಿಮೊಗರು, ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಹೊನ್ನಪ್ಪ ಪೂಜಾರಿ ಕೈಂದಾಡಿ,ಶಾರದಾ ಅರಸ್, ಪೂರ್ಣೇಶ್, ವಿಶಾಲಾಕ್ಷಿ ಬನ್ನೂರು, ರಾಮಣ್ಣ ಪಿಲಿಂಜ, ನಿರಂಜನ ರೈ ಮಠಂತಬೆಟ್ಟು, ಮಲ್ಲಿಕಾ ಅಶೋಕ್ ಪೂಜಾರಿ, ಮಹೇಶ್ಚಂದ್ರ ಸಾಲ್ಯಾನ್, ರೂಪರೇಖಾ ಆಳ್ವ ಮತ್ತಿತರರು ಇದ್ದರು.
ಚರ್ಚೆಗೆ ಬನ್ನಿ-ಸವಾಲು:
ಎಲ್ಲಾ ದೇವಸ್ಥಾನಗಳ ಜಾಗ ಮುಸ್ಲಿಮರಿಗೆ ಹೋಗುತ್ತಿದೆ, ಎದ್ದೇಳಿ ಹಿಂದೂಗಳೇ ಎಂದು ಹೇಳುತ್ತಿರುವ ಕಿಶೋರ್ ಬೊಡ್ಯಾಡಿಯವರೇ,ಇಲ್ಲಿ ದೇವಳದ ಜಾಗದಲ್ಲಿ ಕುಳಿತಿರುವ ಹಿಂದೂಗಳೇ ಎದ್ದೇಳುವುದಿಲ್ಲವಲ್ಲಾ ಎಂದು ಪ್ರಶ್ನಿಸಿದ ಎಂ.ಜಿ. ಹೆಗ್ಡೆ ಅವರು, ಇಲ್ಲಿ ದೇವಳದ ಜಾಗವನ್ನು ಬಿಟ್ಟು ಕೊಡದವರು ಯಾರು, ಸೌತಡ್ಕ ದೇವಳದ ಜಾಗವನ್ನು ಅತಿಕ್ರಮಿಸಿಕೊಂಡವರು ಯಾರು ಎಂದು ಪ್ರಶ್ನಿಸಿದರು. ಹಿಂದೂ ಧರ್ಮದ ಬಗ್ಗೆ ನನ್ನ ಸವಾಲು ಸ್ವೀಕರಿಸಿ, ಹಿಂದೂ ಧರ್ಮ, ವೇದ, ಉಪನಿಷತ್ತುಗಳ ಬಗ್ಗೆ ಚರ್ಚೆಗೆ ಬನ್ನಿ ಎಂದು ಅವರು ಕಿಶೋರ್ ಬೊಡ್ಯಾಡಿ ಅವರಿಗೆ ಸವಾಲು ಹಾಕಿದರು.