ಪಾವಂಜೆ ನಂದಿನಿ ನದಿ ಕಲುಷಿತ: ಸ್ವಚ್ಛಗೊಳಿಸಲು ಒತ್ತಾಯಿಸಿ ಮಾರ್ಚ್ 4ರಂದು ಪ್ರತಿಭಟನೆ

ಪಾವಂಜೆ ನಂದಿನಿ ನದಿ ಕಲುಷಿತ: ಸ್ವಚ್ಛಗೊಳಿಸಲು ಒತ್ತಾಯಿಸಿ ಮಾರ್ಚ್ 4ರಂದು ಪ್ರತಿಭಟನೆ

ಸುರತ್ಕಲ್: ಇಲ್ಲಿನ ಪಾವಂಜೆ ನಂದಿನಿ ನದಿ ಕಲುಷಿತಗೊಂಡಿದ್ದು, ನದಿಯನ್ನು ಕಲುಶಿತಗೊಳಿಸಿರುವವರ ವಿರುದ್ಧ ಸೂಕ್ತ ಕ್ರಮ ವಹಿಸಿ ನಂದಿನಿ ನದಿಯನ್ನು ಸ್ವಚ್ಛಗೊಳಿಸಿ ರಕ್ಷಿಸಬೇಕೆಂದು ಆಗ್ರಹಿಸಿ ಚೇಳಾಯರು ಖಂಡಿಗೆ ನಂದಿನಿ ನದಿ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮಾರ್ಚ್ 4ರಂದು ಚೇಳಾಯರು ನಂದಿನ ಮಿತ್ರ ಮಂಡಳಿ ಬಳಿ ಬೃಹತ್ ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಖಂಡಿಗೆ ದೈವಸ್ಥಾನದ ಸಭಾಭವನದಲ್ಲಿ ರವಿವಾರ ನಡೆದ ಸಭೆಯಲ್ಲಿ ಗ್ರಾಮಸ್ಥರು ಈ ಕುರಿತು ಒಕ್ಕೊರಳ ನಿರ್ಧಾರ ಪ್ರಕಟಿಸಿದರು. ಇತಿಹಾಸ ಪ್ರಸಿದ್ದ ಚೇಳಾಯರು ಖಂಡಿಗೆ ನಂದಿನಿ ನದಿಗೆ ಕೊಡಿಪಾಡಿಯಲ್ಲಿ ನಿರ್ಮಾಣವಾಗಿರುವ ತ್ಯಾಜ್ಯ ಸಂಸ್ಕರಣಾ ಘಟಕದ ನೀರು, ಚೊಕ್ಕಬೆಟ್ಟು ಪರಿಸರದ ಮನೆಯ ತ್ಯಾಜ್ಯ ನೀರು, ಮುಕ್ಕದ ಖಾಸಗಿ ಆಸ್ಪತ್ರೆ, ಕಾಲೇಜು, ವಸತಿ ಗೃಹ ಮತ್ತು ಹೋಟೇಲ್ ಗಳ ತ್ಯಾಜ್ಯ ನೀರನ್ನು ನಂದಿನಿ ನದಿಗೆ ಬೀಡುತ್ತಿದ್ದು, ನದಿ ಸಂಪೂರ್ಣ ಕಲುಷಿತಗೊಂಡಿದೆ. ಇದರಿಂದಾಗಿ ಚೇಳಾಯರು ಖಂಡಿಗೆ ಭಾಗದ ಕೃಷಿಯ ಅವಲಂಬಿತ ಕುಟುಂಬಗಳು ಕೃಷಿ ಮಾಡದ ಪರಿಸ್ಥಿತಿ ಎದುರಾಗಿದೆ. ಕುಡಿಯುವ ನೀರಿಗೂ ಸಮಸ್ಯೆಯಾಗಿದ್ದು ಬಾವಿಗಳು ಮಲಿನಗೊಂಡಿವೆ. ಇತಿಹಾಸ ಪ್ರಸಿದ್ದ ಖಂಡಿಗೆ ದೈವಸ್ಥಾನದ ಮೀನು ಹಿಡಿಯುವ ವಿಶೇಷ ಜಾತ್ರೆ ನಿಲ್ಲುವ ಹಂತಕ್ಕೆ ತಲುಪಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ಆಕ್ರೋಶ ಹೊರಹಾಕಿದರು. 

ಜನರು ಹಾಗೂ ಜಾನುವಾರುಗಳು ಬಾವಿಯ ನೀರು ಕುಡಿದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಹುರಿಯಾಗಿ ಆಸ್ಪತ್ರೆಗೆಗಳಿಗೆ ಸೇರುವಂತಾಗಿದೆ. ನಂದಿನಿ ನದಿ ಸಂರಕ್ಷಣಾ ಸಮಿತಿ ಖಂಡಿಗೆ ಚೇಳಾಯರು ಮೂಲಕ ಜಿಲ್ಲೆಯ ಸಂಸದರು, ಶಾಸಕರಿಗೆ, ಮಂಗಳೂರು ಮಹಾನಗರ ಪಾಲಿಕೆ ಮೇಯರ್, ಜಿಲ್ಲಾಧಿಕಾರಿಗೆ, ನಗರ ಪಾಲಿಕೆ, ಗ್ರಾಮ ಪಂಚಾಯತ್ ಹಾಗೂ ಸಂಬಂಧಿತ ಇಲಾಖೆಗಳಿಗೆ ನೂರಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಸಭೆಯಲ್ಲಿ ಮಾತನಾಡಿದ ಚೇಳಾಯರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಮಾತನಾಡಿ, ನಂದಿನಿ ನದಿ ಕಲುಷಿತ ಗೊಂಡ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಸಂರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ,ನಗರ ಪಾಲಿಕೆ, ಪರಿಸರ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಸರಿಪಡಿಸುವ ಭರವಸೆ ನೀಡಿದ್ದಾರೆ ಹೊರತು ಈವರೆಗೂ ಯಾವುದೇ ಕ್ರಮವಾಗಿಲ್ಲ. ಅದ್ದರಿಂದ ಈ ಸಮಸ್ಯಗೆ ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆಯ ವೈಫಲ್ಯ ನೇರ ಕಾರಣವೆಂದು ದೂರಿದರು.

ವೇದಿಕೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ದಿವಾಕರ ಸಾಮಾನಿ ಚೇಳಾಯರು ಗುತ್ತು, ಸತೀಶ್ ಮುಂಚೂರು, ಚಿತ್ತರಂಜನ್ ಭಂಡಾರಿ, ಉದಯಕುಮಾರ್ ಶೆಟ್ಟಿ ತೋಕೂರುಗುತ್ತು, ವಕೀಲರಾದ ರವೀಂದ್ರನಾಥ್ ಶೆಟ್ಟಿ, ದಯಾನಂದ ಶೆಟ್ಟಿ ಖಂಡಿಗೆ, ಸುಧಾಕರ ಶೆಟ್ಟಿ ಖಂಡಿಗೆ, ವೀಣಾ ಟಿ. ಶೆಟ್ಟಿ ಚೇಳಾಯರು ರುಗುತ್ತು, ಪುಷ್ಪರಾಜ್ ಶೆಟ್ಟಿ ಮಧ್ಯ, ಪ್ರತಿಮಾ ಶೆಟ್ಟಿ ಮಧ್ಯ, ರಮೇಶ್ ಪೂಜಾರಿ ಚೇಳಾಯರು, ಬಾಲಕೃಷ್ಣ ಶೆಟ್ಟಿ ಚೇಳಾಯರು, ಸುರೇಶ್ ಶೆಟ್ಟಿ ಕಾಲನಿ, ಪ್ರಮೋದ್ ಶೆಟ್ಟಿ ಸುರತ್ಕಲ್, ಕಿರಣ್ ಶೆಟ್ಟಿ ಕೆರೆಮನೆ, ಲಕ್ಷ್ಮಣ ಪೂಜಾರಿ, ಮೋಹನ್ ಚೇಳಾಯರು, ಮುದ್ದು ಸುವರ್ಣ, ಚರಣ್ ಕುಮಾರ್, ನಾಗೇಶ್ ಖಂಡಿಗೆ ಮುಂತಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article