
ಬಜೆಟ್‌ನಲ್ಲಿ 300 ಕಾಲುಸಂಕಗಳಿಗೆ ಅನುದಾನ: ಸಚಿವ ಸತೀಶ್ ಜಾರಕಿಹೊಳಿ
ಉಡುಪಿ: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಸೇರಿದಂತೆ ರಾಜ್ಯದ 12 ಜಿಲ್ಲೆಗಳಿಗೆ 300 ಕಾಲುಸಂಕಗಳಿಗೆ ಅನುದಾನ ಮಂಜೂರು ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಉಡುಪಿ ಜಿಲ್ಲೆಯ ಐವರು ಶಾಸಕರು 500 ಕಾಲುಸಂಕಗಳಿಗೆ ಬೇಡಿಕೆ ಇಟ್ಟಿದ್ದು, ಉಡುಪಿ ಸೇರಿದಂತೆ ಎಲ್ಲಾ ಜಿಲ್ಲೆಗಳ ಕಾಲುಸಂಕಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು ಎಂದರು.
ಉಡುಪಿಯಲ್ಲಿ ಈಗಿರುವ ಪ್ರವಾಸಿ ಮಂದಿರದಲ್ಲಿ ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ 20 ಕೊಠಡಿಗಳ ಹೆಚ್ಚುವರಿ ಪ್ರವಾಸಿ ಮಂದಿರ ನಿರ್ಮಿಸಲಾಗುತ್ತದೆ ಎಂದರು.
ಅನ್ನಭಾಗ್ಯ ಶೀಘ್ರ ಬಿಡುಗಡೆ:
ಅನ್ನಭಾಗ್ಯ ಅಕ್ಕಿ ಹಣ ಇನ್ನೊಂದೆರಡು ತಿಂಗಳಲ್ಲಿ ಬಿಡುಗಡೆ ಆಗುತ್ತದೆ. ಸ್ವಲ್ಪ ಹೆಚ್ಚು ಕಮ್ಮಿ ಆಗುವುದು ಸಹಜ. ಗೃಹಲಕ್ಷ್ಮಿ ಹಣ ಎರಡು ತಿಂಗಳದ್ದು ಒಟ್ಟಾಗಿ ಕೊಡುತ್ತಾರೆ. ಗ್ಯಾರಂಟಿ ಯೋಜನೆಯಿಂದ ಲೋಕೋಪಯೋಗಿ ಇಲಾಖೆ ಅನುದಾನಕ್ಕೆ ಯಾವುದೇ ತೊಂದರೆ ಆಗಿಲ್ಲ. ಕಳೆದ ಸಲಕ್ಕಿಂತಲೂ ಹೆಚ್ಚಿನ ಅನುದಾನಕ್ಕೆ ಪ್ರಯತ್ನ ಮಾಡಿದ್ದೇವೆ. ಶಾಸಕರಿಗೂ ವಿಶೇಷ ಅನುದಾನ ಕೊಟ್ಟಿದ್ದೇವೆ. ಗ್ಯಾರೆಂಟಿ ಹಣವೇ ಬೇರೆ ಇದೆ. ಅಭಿವೃದ್ಧಿ ಹಣವೇ ಬೇರೆ ಇದೆ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ ಇದ್ದರು.