
ಪಕ್ಷದೊಳಗಿನ ಆಂತರಿಕ ವಿಚಾರ ಮಾತುಕತೆಯಿಂದ ಇತ್ಯರ್ಥ: ಸಚಿವ ಸತೀಶ್ ಜಾರಕಿಹೊಳಿ
ಉಡುಪಿ: ಪಕ್ಷದೊಳಗಿನ ವಿಚಾರವನ್ನು ಆಂತರಿಕವಾಗಿ ನಾವು ಮಾತನಾಡಿ, ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳುತ್ತೇವೆ. ಸಮಸ್ಯೆ ಇಲ್ಲ ಎನ್ನುವುದು ನಮ್ಮ ಭಾವನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಿಎಂ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅವರ ಎಂಬ ಹೇಳಿಕೆ ಬಗ್ಗೆ ಸೋಮವಾರ ಉಡುಪಿಯಲ್ಲಿ ಪ್ರತಿಕ್ರಿಯಿಸಿ, ಅದು ನಮ್ಮ ಪಕ್ಷದೊಳಗೆ ಚರ್ಚೆ ಮಾಡಬೇಕಾದ ವಿಷಯ. ಡಿಕೆಶಿ ಮತ್ತು ರಾಜಣ್ಣ ಹೇಳಿಕೆಯ ಮಧ್ಯ ನಾನು ಬರಲು ಸಾಧ್ಯವಿಲ್ಲ. ಅವರವರ ಹೇಳಿಕೆಗಳಿಗೆ ಅವರೇ ಉತ್ತರ ಕೊಡಬೇಕು. ರಾಜಣ್ಣಗೆ ಸಿಟ್ಟು ಏನೂ ಇಲ್ಲ, ರಾಜಣ್ಣ ಇರುವುದೇ ಹಾಗೆ ಎಂದರು.
ನೋಡೋಣ ಅವರನ್ನೇ ಕೇಳುತ್ತೇನೆ ಏನು ಸಮಸ್ಯೆಯಾಗಿದೆ ತಿಳಿದುಕೊಳ್ಳೋಣ. ನೇರವಾಗಿ ನಾನೇ ಅವರನ್ನು ಕೇಳುತ್ತೇನೆ ಭಿನ್ನರ ಸಮಾವೇಶದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸದ್ಯಕ್ಕಂತೂ ಯಾವುದೇ ಸಮಾವೇಶ ಮಾಡುವ ಪ್ರಸ್ತಾವನೆ ಇಲ್ಲ, ಭವಿಷ್ಯದಲ್ಲಿ ಮಾಡಬಹುದು. ಇದ್ದಾಗ ಎಲ್ಲ ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದರು.
ಕುಂಭಮೇಳ: ವೈಯಕ್ತಿಕ ವಿಚಾರ
ಕುಂಭಮೇಳದಲ್ಲಿ ಭಾಗವಹಿಸುವುದರಿಂದ ಬಡತನ ಹೋಗುವುದಿಲ್ಲ ಎಂನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಂಭಮೇಳದಲ್ಲಿ ಭಾಗಿಯಾಗಿರುವ ಬಗ್ಗೆ ಪ್ರಶ್ನಿಸಿದಾಗ, ಕುಂಭಮೇಳದಲ್ಲಿ ಭಾಗವಹಿಸುವುದು, ಬಿಡುವುದು ಅವರವರ ವೈಯಕ್ತಿಕ ಅಭಿಪ್ರಾಯ. ಖರ್ಗೆ ವರ್ಷನ್ ಅವರು ಹೇಳಿದ್ದಾರೆ, ಡಿಕೆಶಿ ವರ್ಷನ್ ಇವರು ಹೇಳಿದ್ದಾರೆ. ಖರ್ಗೆ ಹೇಳಿದ ತಕ್ಷಣ ಹೋಗುವವರನ್ನು ನಿಲ್ಲಿಸಲು ಸಾಧ್ಯವಿಲ್ಲ. ಕುಂಭಮೇಳಕ್ಕೆ ಹೋಗುವವರು ಮುಕ್ತವಾಗಿದ್ದಾರೆ, ಎಲ್ಲರೂ ಹೋಗುತ್ತಿದ್ದಾರೆ. ಅದರಲ್ಲಿ ಏನೂ ಗೊಂದಲ ಆಗುವುದಿಲ್ಲ ಎಂದರು.
ಕುಂಭಮೇಳಕ್ಕೆ ಹೋಗುವುದು ಅವರವರ ಭಕ್ತಿ. ಭಕ್ತಿ, ಶಕ್ತಿ ಇದ್ದವರು ಹೋಗಿಯೇ ಹೋಗುತ್ತಾರೆ. ಉಡುಪಿಯಿಂದಲೂ ರೈಲು ಹೊರಟಿದ್ದು, ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಕುಂಭಮೇಳಕ್ಕೆ ಹೊರಟಿದ್ದಾರೆ. ರಶ್ ಕಡಿಮೆಯಾಗಲಿ ಆಮೇಲೆ ನಾನು ಹೋಗಿ ಬರುತ್ತೇನೆ ಎಂದರು.
ಮಂಗಳೂರಿನಿಂದ ಕುಂಭಮೇಳಕ್ಕೆ ಹೊರಟವರಲ್ಲಿ 50 ಪರ್ಸೆಂಟ್ ಕಾಂಗ್ರೆಸಿನವರೇ ಇದ್ದಾರೆ. ಅದೇನು ಒಂದೇ ಪಕ್ಷಕ್ಕೆ ಸೀಮಿತವಾದ ಆಚರಣೆ ಅಲ್ಲ, ಯಾರ ಭಕ್ತಿಗೂ ನಾವು ಅಡ್ಡಿಪಡಿಸಲು ಹೋಗುವುದಿಲ್ಲ. ಜನರ ಭಕ್ತಿ ಪ್ರೀತಿ ವಿಶ್ವಾಸಕ್ಕೆ ಸಂಬಂಧಪಟ್ಟ ವಿಷಯವಾಗಿದೆ ಎಂದರು.
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ವಿಚಾರದಲ್ಲಿ ನಾವು ಕರಾವಳಿ ಕಾರ್ಯಕರ್ತರ ಜೊತೆ ನೇರ ಸಂಪರ್ಕದಲ್ಲಿ ಇರುತ್ತೇವೆ. ಸಿಎಂ ಆಗುವುದು, ಬಿಡುವುದು ನಮ್ಮ ಹಂತದಲ್ಲಿ ಇಲ್ಲ. ನಾವು ಯಾರನ್ನು ಸಿಎಂ ಮಾಡುವವರು ಅಲ್ಲ, ನಾವು ಕೂಡ ನಿಮ್ಮ ಥರಾನೇ ಪ್ರೇಕ್ಷಕರು ಎಂದರು.