
ಪರಶುರಾಮ ಮೂರ್ತಿ ವಿವಾದ: ಅಷ್ಟಮಂಗಲ ನಡೆಸಲು ಸಲಹೆ
Thursday, February 20, 2025
ಉಡುಪಿ: ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್‌ನ ಪರಶುರಾಮ ಮೂರ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಸಂಘಸಂಸ್ಥೆಗಳು, ಧಾರ್ಮಿಕ ಮುಂದಾಳುಗಳ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಸಲಹೆ ನೀಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಶುರಾಮ ಮೂರ್ತಿ ವಿವಾದ ಅಂತ್ಯ ಯಾವಾಗ ಎಂದು ಜನ ಪ್ರಶ್ನಿಸತೊಡಗಿದ್ದಾರೆ. ಮೂರ್ತಿ ಅಸಲಿಯೋ, ನಕಲಿಯೋ ಎಂಬ ಬಗ್ಗೆ ಪೋಲಿಸ್ ತನಿಖೆ ಚಾಲ್ತಿಯಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಶಿಲ್ಪಿ ಬಂಧಿಸಲ್ಪಟ್ಟಿದ್ದರು. ಹಾಗಾಗಿ ವಿಗ್ರಹ ಪ್ರತಿಷ್ಠಾಪನೆಯ ಆರಂಭದಲ್ಲಿಯೇ ನಡೆದಿರುವ ಅನಾಹುತಗಳಿಂದ ಜನ ಭಯಭೀತರಾಗಿದ್ದಾರೆ ಎಂದರು.
ಥೀಮ್ ಪಾರ್ಕ್ ನಿರ್ಮಾಣದ ಮೊದಲು ಉಮಿಕಲ್ ಬೆಟ್ಟದಲ್ಲಿ ದೈವ ಸಾನಿಧ್ಯವಿತ್ತು. ಅದನ್ನು ನೆಲಸಮ ಮಾಡಿ ಕಾಮಗಾರಿ ನಡೆಸಲಾಗಿದೆ. ಇದೀಗ ಅದರ ದೋಷವೇ ಇಂಥ ದುರಂತಗಳಿಗೆ ಕಾರಣವಾಗಿರಬಹುದು ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಎಲ್ಲಾ ಪ್ರಶ್ನೆಗಳನ್ನು ಅಷ್ಟಮಂಗಲ ಪ್ರಶ್ನಾಚಿಂತನೆ ಮೂಲಕ ಪರಿಹರಿಸಿಕೊಳ್ಳಬೇಕೆಂದು ನನ್ನ ಸಲಹೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ ಮತ್ತು ಅಜಿತ್ ಹೆಗ್ಡೆ ಉಪಸ್ಥಿತರಿದ್ದರು.