
ಅಮಲು ಪಾನೀಯ ನೀಡಿ ಕಳ್ಳತನ ನಡೆಸಿದ ಆರೋಪಿಗೆ ಜೈಲು
ಉಡುಪಿ: ಕಳೆದ 12 ವರ್ಷದ ಹಿಂದೆ ಸಂಬಂಧಿಕರಿಗೆ ತಂಪು ಪಾನೀಯದಲ್ಲಿ ಅಮಲೇರುವ ಔಷಧಿಯನ್ನು ಬೆರೆಸಿ ಪ್ರಜ್ಞೆ ತಪ್ಪುವಂತೆ ಮಾಡಿ, ಕಳ್ಳತನ ನಡೆಸಿದಾತನನ್ನು ಉಡುಪಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶ ಕಿರಣ್ ಎಸ್ ಗಂಗಣ್ಣವರ್ ದೋಷಿ ಎಂದು ಪರಿಗಣಿಸಿ ಜೂಲು ಶಿಕ್ಷೆಗೆ ಆದೇಶಿಸಿದ್ದಾರೆ. ಸುಧೀರ್ ಪೂಜಾರಿ ಶಿಕ್ಷೆಗೆ ಗುರಿಯಾದ ಆರೋಪಿ.
ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಮೂಡುಗರಡಿ ಎಂಬಲ್ಲಿ ದೂರುದಾರೆ ರಾಧ (55) ತನ್ನ ತಾಯಿ ಭಾಗಿ ಪೂಜಾರ್ತಿ, ಮಕ್ಕಳಾದ ಆಶಾ, ನಿಶಾ ಹಾಗೂ ಮೊಮ್ಮಕ್ಕಳಾದ ಅನುಷಾ ಮತ್ತು ಆದೇಶ ಅವರೊಂದಿಗೆ ವಾಸವಿದ್ದರು. 2013 ರ ಜ.5ರಂದು ರಾಧ, ತಾಯಿ ಭಾಗಿ ಪೂಜಾರ್ತಿ ಮನೆಯಲ್ಲಿದ್ದಾಗ ಮಧ್ಯಾಹ್ನ ಸುಮಾರು 2.30 ಗಂಟೆಗೆ ದೂರದ ಸಂಬಂಧಿ ಸುಧೀರ್ ಪೂಜಾರಿ ಮನೆಗೆ ಬಂದಿದ್ದ.
ಮಧ್ಯಾಹ್ನ 3 ಗಂಟೆಗೆ ರಾಧ ಅವರ ಮೊಮ್ಮಕ್ಕಳು ಶಾಲೆಯಿಂದ ಮನೆಗೆ ಬಂದಿದ್ದು, ಆಗ ಸುಧೀರ್ ಪೂಜಾರಿ, ತಾನು ತಂದಿದ್ದ ಮಿರಿಂಡಾ ತಂಪು ಪಾನೀಯವನ್ನು ರಾಧಾ, ತಾಯಿ ಭಾಗಿ ಪೂಜಾರ್ತಿ, ಮೊಮ್ಮಕ್ಕಳಾದ ಅನುಷಾ ಮತ್ತು ಆದೇಶ ಅವರಿಗೆ ಕುಡಿಯಲು ನೀಡಿದ್ದ. ಪಾನಿ ಕುಡಿದ ನಂತರ ಅವರೆಲ್ಲರಿಗೂ ತಲೆಸುತ್ತು ಬಂದು ಮಲಗಿದ್ದರು.
ರಾಧ ಎಚ್ಚರಗೊಂಡಾಗ ಮನೆಯಲ್ಲಿದ್ದ ಸುಧೀರ್ ಪೂಜಾರಿ ಹೊರಟು ಹೋಗಿದ್ದು, ಮನೆಯಲ್ಲಿದ್ದ ಮೊಬೈಲ್ ಫೋನ್ ಕಾಣೆಯಾಗಿತ್ತು. ನಂತರ ರಾಧ, ನೆರೆಮನೆಯವರ ಪೋನ್ ಮೂಲಕ ಕೆಲಸಕ್ಕೆ ಹೋದ ತನ್ನ ಮಗಳು ಆಶಾಳಿಗೆ ವಿಚಾರ ತಿಳಿಸಿದ್ದು, ಆಶಾ ಮನೆಗೆ ಬಂದು ಅಸ್ವಸ್ಥಗೊಂಡ ರಾಧ, ಭಾಗಿ ಪೂಜಾರ್ತಿ, ಅನುಷ ಹಾಗೂ ಆದೇಶ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮರುದಿನ ಜ.೬ರಂದು ರಾಧ ಆರೋಪಿ ಸುಧೀರ್ ಪೂಜಾರಿ ನಮಗೆಲ್ಲಾ ಅಮಲೇರುವ ಔಷಧ ನೀಡಿ ಮನೆಯಲ್ಲಿದ್ದ ಮೊಬೈಲ್ ಫೋನ್‌ನ್ನು ಕಳವು ಮಾಡಿದ್ದಾನೆ ಎಂದು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜ. 9ರಂದು ಆರೋಪಿ ಸುಧೀರ್ ಪೂಜಾರಿಯನ್ನು ಪೋಲಿಸರು ಬಂಧಿಸಿದ್ದು, ವಿಚಾರಣೆಯಲ್ಲಿ ತಾನು ಮಿರಿಂಡಾ ತಂಪು ಪಾನೀಯದಲ್ಲಿ ರೆಸಿನಿಯಾ ಎಂಬ ಔಷಧ ಬೆರೆಸಿ ಮನೆ ಮಂದಿಗೆ ನೀಡಿದ್ದು, ಮನೆ ಮಂದಿ ಅಸ್ವಸ್ಥಗೊಂಡ ನಂತರ ಕಳವು ಮಾಡಲು ಮನೆಯನ್ನು ಹುಡುಕಿದಾಗ ಬೆಲೆ ಬಾಳುವ ವಸ್ತುಗಳು ಸಿಗಲಿಲ್ಲ. ಹೀಗಾಗಿ ಮನೆಯಲ್ಲಿದ್ದ ಮೊಬೈಲ್ ಪೋನನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ತಪ್ಪು ಒಪ್ಪಿಕೊಂಡು ತನ್ನ ವಶದಲ್ಲಿದ್ದ ಕಳವು ಮಾಡಿದ ಮೊಬೈಲ್ ಫೋನನ್ನು ಹಾಜರುಪಡಿಸಿದ್ದ. ಬ್ರಹ್ಮಾವರ ಪೊಲೀಸ್ ಠಾಣೆಯ ಆಗಿನ ಪಿಎಸ್‌ಐ ಗಿರೀಶ್ ಕುಮಾರ್ ಎಸ್. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಆರೋಪಿ ತಲೆಮರೆಸಿಕೊಂಡಿದ್ದ:
ನ್ಯಾಯಾಲಯದಿಂದ ಆರೋಪಿ ಜಾಮೀನು ಪಡೆದುಕೊಂಡು 2015ರ ವರೆಗೆ ನ್ಯಾಯಾಲಯಕ್ಕೆ ಹಾಜರಾಗಿ, ನಂತರ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಆತನ ವಿರುದ್ದ ಎಲ್‌ಪಿಸಿ ವಾರೆಂಟ್ ಹೊರಡಿಸಲಾಗಿತ್ತು. 2024ರ ಆ.21ರಂದು ಬ್ರಹ್ಮಾವರ ಪೊಲೀಸರು ಆರೋಪಿಯನ್ನು ಎಲ್‌ಪಿಸಿ ವಾರೆಂಟ್‌ನಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ 1 ವರ್ಷ ಸಾದಾ ಶಿಕ್ಷೆ ಮತ್ತು 5 ಸಾವಿರ ದಂಡ, 380ರಡಿಯ ಅಪರಾಧಕ್ಕೆ 3 ತಿಂಗಳ ಸಾದಾ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.