
ಊರು ಬಿಟ್ಟು, ರಾಜ್ಯ ಸುತ್ತಾಡಿ ಉಡುಪಿಗೆ ಬಂದು ಸಿಕ್ಕಿಬಿದ್ದ ದಿಗಂತ್...!
ಬಂಟ್ವಾಳ: ನಿಗೂಢವಾಗಿ ಕಾಣೆಯಾಗಿದ್ದ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ ದಿಗಂತ್ ಉಡುಪಿಯಲ್ಲಿ ಸಾರ್ವಜನಿಕರಿಗೆ ಸಿಕ್ಕಿದ್ದು, ಪೊಲೀಸರು ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ ಹಲವು ದಿನಗಳಿಂದ ನಿದ್ದೆಗೆಟ್ಟಿದ್ದ ಪೊಲೀಸರು ಅತನ ಪತ್ತೆಯಿಂದಾಗಿ ಈ ಪ್ರಕರಣದಿಂದ ನಿಟ್ಟುಸಿರು ಬಿಡುವಂತಾಗಿದೆ.ಹೆತ್ತವರು ಮಗ ಮರಳಿ ಮನೆಗೆ ಬಂದ ಸಂತಸದಲ್ಲಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಓದುತಿದ್ದ ದಿಗಂತ್ ಪರೀಕ್ಷೆಗೆ ಹಾಜರಾಗುವ ಹಾಲ್ ಟಿಕೆಟ್ ಪಡೆದು ಬಳಿಕ ನಿಗೂಢವಾಗಿ ಕಾಣೆಯಾಗಿರುವುದು ಹಲವು ಗೊಂದಲಗಳಿಗೆ ಕಾರಣವಾಗಿತ್ತು.
ಪತ್ತೆಕಾರ್ಯಕ್ಕೆ ಯಾವುದೇ ಕುರುಹು ಸಿಗಲಿಲ್ಲ. ಈ ಬಗ್ಗೆ ಸಾರ್ಜನಿಕರು ಆತಂಕಕ್ಕೆ ಒಳಗಾಗಿದ್ದು ಮಾತ್ರವಲ್ಲ ವಿಧಾನ ಸಭೆ ಕಲಾಪದಲ್ಲಿ ಜಿಲ್ಲೆಯ ಶಾಸಕರು ಮಾತ್ರವಲ್ಲದೆ ಸಭಾಧ್ಯಕ್ಷರು ಸಹಿತ ಅನೇಕರು ತನಿಖೆ ಶೀಘ್ರವಾಗಿ ಚುರುಕುಗೊಳಿಸುವಂತೆ ಸರಕಾರಕ್ಕೆ ಆಗ್ರಹಿಸಲಾಗಿತ್ತು.
ಪೊಲೀಸರಿಂದ ವಿಚಾರಣೆ:
ಪೊಲೀಸರ ಮುಂದೆ ಸತ್ಯವನ್ನೇ ಹೇಳುತ್ತೇನೆ ಎಂದು ಎಲ್ಲವನ್ನೂ ಇದೀಗ ಬಾಯಿ ಬಿಟ್ಟಿದ್ದಾನೆ ದಿಗಂತ್.
ಕಾಣೆಯಾದ ದಿನವೇ ಫೆ.25ರಂದು ಊರು ಬಿಟ್ಟು ಮೈಸೂರು ಸೇರಿದ. ಅಲ್ಲಿಂದ ಬೆಂಗಳೂರು ತೆರಳಿ ಒಂದೆರಡು ದಿನ ತಿರುಗಾಡಿದ್ದಾನೆ. ಬಳಿಕ ರೆಸಾರ್ಟ್ ಒಂದರಲ್ಲಿ ಕೆಲಸಕ್ಕೂ ಸೇರಿದ್ದು ಮೂರು ದಿನ ಬಳಿಕ ಹಣ ಪಡೆದು ಅಲ್ಲಿಂದ ಶಿವಮೊಗ್ಗಕ್ಕೆ ತೆರಳಿ ಮತ್ತೆ ಮೈಸೂರಿಗೆ ವಾಪಾಸ್ ಹೋಗಿದ್ದಾನೆ. ಮೈಸೂರಿನಿಂದ ಮತ್ತೆ ಮುರುಡೇಶ್ವರ ಹೋಗುವ ರೈಲು ಹತ್ತಿ ಉಡುಪಿಯಲ್ಲಿ ಇಳಿದಿದ್ದಾನೆ. ಉಡುಪಿಯಲ್ಲಿ ಅತ್ತಿತ್ತ ನೋಡಿ ಡಿಮಾರ್ಟ್‌ಗೆ ಪ್ರವೇಶಿಸಿದ್ದಾನೆ. ಅಲ್ಲಿ ತಿರುಗಾಡುತ್ತಿದ್ದ ಈತನನ್ನು ಕಂಡು ಸಂಶಯಗೊಂಡು ವಿಚಾರಣೆ ನಡೆಸಿ ಕಾಣೆಯಾದ ದಿಗಂತ್ ಈತನೇ ಎಂದು ಖಚಿತಪಡಿಸಿಕೊಂಡು ಮಾಹಿತಿ ನೀಡಿದ್ದಾರೆ. ಅಲ್ಲಿನ ಮೇನೇಜರ್ ಈತನ ತಾಯಿಯ ನಂಬರ್ ಪಡೆದು ದಿಗಂತ್‌ನಲ್ಲಿ ಮಾತನಾಡಿಸಿದ್ದಾರೆ. ಬಳಿಕ ಪೊಲೀಸರು ಮನೆಯವರಿಗೆ ಒಪ್ಪಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯವನ್ನು ಹೊರಗೆಹಾಕಿದ್ದಾನೆ.
ಯಾಕೆ ಹೀಗೆ ಮಾಡಿದೆ ಮಾರಾಯ? ಎಂದು ಕೇಳಿದರೆ ಮೊನ್ನೆ ನಡೆದ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿತ್ತು. ಹಾಗಾಗಿ ಫೈನಲ್ ಪರೀಕ್ಷೆ ಬರೆಯುವುದು ಕಷ್ಟವಾದೀತು ಎಂಬ ಭಯ ದಿಂದ ಹೀಗೆ ಮಾಡಿದೆ ಎಂದು ತನ್ನ ಅಸಹಾಯಕತೆಯನ್ನು ಹೇಳಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಈತ ಮಂಗಳೂರಿನ ರಿಮಾಂಡ್ ಹೋಂನಲ್ಲಿದ್ದು, ಅತನನ್ನು ಹೈಕೋಟ್೯ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಆದರೆ ದಿಗಂತ್ ಮನೆಗೆ ವಾಪಾಸಾಗುತ್ತಾನೋ ಇಲ್ಲವೋ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.