
ಗ್ರಾಮಸ್ಥರು ಭಾಗವಹಿಸದ ಗ್ರಾಮಸಭೆ ಅಪೂರ್ಣ ಗ್ರಾಮ ಸಭೆ
ಬಂಟ್ವಾಳ: ಗ್ರಾಮಸ್ಥರು ಭಾಗವಹಿಸದೆ ಇರುವಂತಹ ಗ್ರಾಮಸಭೆ ಅಪೂರ್ಣ ಗ್ರಾಮ ಸಭೆಯಾಗುತ್ತದೆ ಎಂದು ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದರು.
ಸೋಮವಾರ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ರೋಟರಿ ಸಭಾ ಭವನದಲ್ಲಿ ನಡೆದ ನರಿಕೊಂಬು ಗ್ರಾ.ಪಂ. ವ್ಯಾಪ್ತಿಯ ದ್ವಿತೀಯ ಸುತ್ತಿನ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮಸ್ಥರಿಗೆ ವಿವಿಧ ಇಲಾಖೆಗಳ ಮಾಹಿತಿ ನೀಡುವ ನಿಟ್ಟಿನಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಹಾಜರಿದ್ದರೂ ಗ್ರಾಮಸ್ಥರೇ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸದೆ ನಿರಾಸಕ್ತಿ ತಾಳಿದರೆ ಗ್ರಾಮ ಸಭೆಯು ಪರಿಪೂರ್ಣ ಆಗಲು ಸಾಧ್ಯವಿಲ್ಲ ಗ್ರಾಮಸ್ಥರು ಇಂತಹ ಗ್ರಾಮಸಭೆಯಲ್ಲಿ ಹಾಜರಿದ್ದು, ಚರ್ಚೆಯಲ್ಲಿ ಭಾಗವಹಿಸಿ ಗ್ರಾಮದ ಅಭಿವೃದ್ಧಿಯಲ್ಲಿ ಸಹಕರಿಸಬೇಕು ಎಂದ ಅವರು ಮುಂದಿನ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ದೆಸೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಜೊತೆಗೆ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಕೈಜೋಡಿಸಬೇಕೆಂದು ಕೋರಿದರು.
ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಸಾಮಾಜಿಕ ಅರಣ್ಯ ವಲಯ ಬಂಟ್ವಾಳದ ಉಪವಲಯ ಅರಣ್ಯ ಅಧಿಕಾರಿ ಕೃಷ್ಣಜೋಗಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯಿಂದ ಸಿಗುವ ಸವಲತ್ತಿನ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಗ್ರಾಮಸ್ಥರು ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮೋಹಿನಿ, ಗ್ರಾಮ ಪಂಚಾಯತ್ ಸದಸ್ಯರುಗಳು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಮ ವ್ಯಾಪ್ತಿಯ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಗ್ರಾಮಸ್ಥರು ಭಾಗವಹಿಸಿದ್ದರು.
ನರಿಕೊಂಬು ಶಾಲಾ ಮಕ್ಕಳು ನಾಡಗೀತೆ ಹಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ. ಸ್ವಾಗತಿಸಿ, ವಂದಿಸಿದರು.