
ಹಣ ಸರ್ವಸ್ವವಲ್ಲ, ದುಡಿಯುವ ಇಚ್ಛಾಶಕ್ತಿ ಮುಖ್ಯ: ಮುನಿಯಾಲು ಉದಯ ಶೆಟ್ಟಿ
ಕಾರ್ಕಳ: ಬದುಕಲು ಹಣ ಮಾತ್ರ ಮುಖ್ಯವಲ್ಲ, ದುಡಿಯಬೇಕೆಂಬ ಇಚ್ಛಾ ಶಕ್ತಿ ಮುಖ್ಯ. ಭೂಲೋಕದ ಸ್ವರ್ಗದಂತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಎಲ್ಲರೂ ಒಂದು ಕಡೆ ಒಟ್ಟು ಸೇರಿ ಒಂದೇ ಕುಟುಂಬದವರಂತೆ ಬೆರೆತು ಸುಖ-ದುಃಖ ಹಂಚಿಕೊಂಡು ಬಾಳಲು ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗಿಸಿಕೊಳ್ಳೋಣ ಎಂದು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಹೇಳಿದರು.
ಬಜಗೋಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ನಡೆದ ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ಮೂಡುಬಿದಿರೆ ಇದರ ರಜತ ಮಹೋತ್ಸವ ಸಮಾರಂಭ ಮತ್ತು ಸ್ವಾವಲಂಬನೆ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಮಾಜದ ದುರ್ಬಲ ಮತ್ತು ಬಡಜನರ ವಿಶೇಷವಾಗಿ ಮಹಿಳೆಯರ ಸಬಲೀಕರಣ ತತ್ವದ ಅಡಿಯಲ್ಲಿ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗಿಸ್ ಅಧ್ಯಕ್ಷತೆ ವಹಿಸಿದ್ದರು.
ಸ್ವಾವಲಂಬನ ದಿನಾಚರಣೆಯ ಸಂದೇಶ ನೀಡಿದ ಮೂಡಬಿದ್ರೆ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿ, ಸುಖದ ಜೀವನ ಎನ್ನುವುದು ಅದು ಸಾಮೂಹಿಕವಾದದ್ದು. ಸಂಘ ಸಂಸ್ಥೆಗಳ ಸದಸ್ಯರಾಗಿ ಸಕ್ರಿಯರಾದಾಗ ಅದನ್ನು ಅನುಭವಿಸುವ ಭಾಗ್ಯ ಲಭಿಸುವುದು ಎಂದರು.
ಆದರ್ಶ ಸಂಸ್ಥೆಯ ನಿರ್ದೇಶಕ ಇಮ್ಯಾನ್ಯುಯಲ್ ಮೋನಿಸ್, ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಮೂಡಬಿದ್ರೆ ಇದರ ಅಧ್ಯಕ್ಷೆ ವಸಂತಿ ಶೆಟ್ಟಿ ಶುಭ ಹಾರೈಸಿದರು.
ಮೂಡಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೃತಿ ಡಿ. ಅತಿಕಾರಿ, ನಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಪೂಜಾರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಜಗೋಳಿ ಇದರ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೀಪಕ್ ಅತಿಕಾರಿ, ನಿಕಟಪೂರ್ವ ಅಧ್ಯಕ್ಷ ನಿತೀಶ್ ಶೆಟ್ಟಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸುಲೋಚನ ಮತ್ತು ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಯಶೋಧರ ವಂದಿಸಿದರು.