ಕಂದಾಯ ಇಲಾಖೆಯ ಗೋಲ್ ಮಾಲ್

ಕಂದಾಯ ಇಲಾಖೆಯ ಗೋಲ್ ಮಾಲ್

ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ 2ನೇ ಹಂತದ ಒಳಚರಂಡಿ ಯೋಜನೆಗೆ ಕೆಳಗಿನಪೇಟೆಯಲ್ಲಿ ವೆಟ್‌ವೆಲ್ ಮತ್ತು ಪಂಪ್‌ಹೌಸ್ ನಿರ್ಮಾಣಕ್ಕೆ ಕ.ನ.ನೀ.ಸ ಮತ್ತು ಒ.ಚ.ಮಂಡಳಿ ಖಾಸಗಿ ಜಮೀನನ್ನು ಭೂಮಾಲೀಕರಿಂದ ಕೋಟ್ಯಾಂತರ ರೂ.ವಿಗೆ ನೇರ ಖರೀದಿಸಿದೆ ಎಂಬ ವಿಚಾರವು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

ಪುರಸಭಾಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ವರ್ವೆ ಬಂದಿದ್ದು, ಈ ವಿಚಾರದಲ್ಲಿ ಕಂದಾಯ ಇಲಾಖೆ ಸಂಪೂರ್ಣ ನಿಷ್ಕ್ರೀಯವಾಗಿ ಕಾರ್ಯನಿರ್ವಹಿಸಿದ ಪರಿಣಾಮವನ್ನು ಪುರಸಭೆ ಶಿಕ್ಷೆ ಅನುಭವಿಸಬೇಕಾಗಿದೆ. ಯೋಜನಾಪ್ರಾಧಿಕಾರದಿಂದ ವಲಯ ಬದಲಿಸಲಾಗಿದೆ. ಜಿಲ್ಲಾಡಳಿತ ಮಟ್ಟದಲ್ಲೇ ಜಮೀನು ಕನ್ವರ್ಶನ್ ಮಾಡಲಾಗಿದೆ. ನೋಟೀಪಿಕೇಶನ್ ಜಮೀನನ್ನೇ ಒಂದುಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಲಾಗಿದ್ದು, ಇದಕ್ಕೆ ಬಳಸಲಾದ ಅನುದಾನ ಯಾವುದು ಎಂದು ಸದಸ್ಯ ಗೋವಿಂದಪ್ರಭು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಶರೀಫ್ ಈ ಜಮೀನಿಗೆ ದರ ನಿಗದಿ ಮಾಡಿರುವ ಅಧಿಕಾರಿ ಯಾರು? ಸರಕಾರ ದರನಿಗದಿಯಲ್ಲು ದ್ವಂದ್ವ ನೀತಿ ಅನುಸರಿಸಿದೆಯೆ ಎಂದು ಪ್ರಶ್ನಿಸಿದರಲ್ಲದೆ ಇದಕ್ಕೆ ಖಾತೆ ನೀಡುವುದಕ್ಕೆ ಸದಸ್ಯರ ವಿರೋಧವಿದೆ ಎಂದು ಗುಡುಗಿದರು.

ಸದಸ್ಯ ರಾಮಕೃಷ್ಣ ಆಳ್ವ ಮಾತನಾಡಿ, ರಾ.ಹೆ.ಪಕ್ಕ ತುಂಬೆ ವೆಂಟೆಡ್ ಡ್ಯಾಂ ನಿರ್ಮಾಣ ಭೂಸ್ವಾಧೀನ ಪಡಿಸಿಗೊಂಡಾಗ ನಮಗೆ ಜುಜುಬಿ ಮೊತ್ತ ನೀಡಿದ್ದಾರೆ.ಬಂಟ್ವಾಳದಲ್ಲಿ ಎರಡರಿಂದ ಮೂರು ಲಕ್ಷ ಮೌಲ್ಯವಿರುವ ಜಮೀನನ್ನು ಕೋಟ್ಯಾಂತರ ರೂ. ಮೌಲ್ಯವನ್ನು ಯಾವ ಮಾನದಂಡದಲ್ಲಿ ನಿಗದಿಪಡಿಸಲಾಗಿದೆ ಎಂದು ಪ್ರಶ್ನಿಸಿದರು.

ಈ ಎಲ್ಲಾ ಪ್ರಕ್ರಿಯೆ ಆಡಳಿತಾಧಿಕಾರಿಯವರ ಕಾಲದಲ್ಲೇ ನಡೆದಿದ್ದು, 60 ರಿಂದ 70 ಲಕ್ಷದ ವರೆಗೆ ಪುರಸಭೆಯಿಂದಲೇ ಹಣವನ್ನು ವರ್ಗಾಯಿಸಿರುವ ಬಗ್ಗೆ ಖಚಿತ ಮಾಹಿತಿ ಇದೆ ಎಂದು ಸದಸ್ಯ ಗೋವಿಂದಪ್ರಭು ಅವರು ಸಭೆಯ ಗಮನಕ್ಕೆ ತಂದರು. ಸಹಾಯಕ ಕಮಿಷನರ್ ಅವರೇ ಏಕಾಏಕಿ ದರ ನಿಗದಿ ಮಾಡಿ ಮಾರಾಟ ಮಾಡಿದ್ದಾರೆಂದರೆ ಇದರ ಹಿಂದೆ ಆಗಿರುವ ಗೋಲ್ ಮಾಲ್ ಎಷ್ಠಿರಬಹುದು? ಎಂದು ಸದಸ್ಯ ಪ್ರಭು ಪ್ರಶ್ನಿಸಿದರು.

ಖಾತೆ ನೀಡದಿರಿ:

ಈ ವಿಚಾರದಲ್ಲಿ ಸಂಬಂಧಪಟ್ಟವರಿಗೆ ಯಾವುದೇ ಕಾರಣಕ್ಕು ಖಾತಾ ನಂಬರ್ ನೀಡದಂತೆ ಸದಸ್ಯರು ಅಧ್ಯಕ್ಷ ವಾಸುಪೂಜಾರಿಯವರನ್ನು ಒತ್ತಾಯಿಸಿದರು. ಆಗ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಈಗಾಗಲೇ ಅವರು ಹಣ ಪಾವತಿಸಿದರಿಂದ ಬಿ-ಖಾತೆಯನ್ನು ಕೊಡಲೇ ಬೇಕಾಗಿದೆ.ಇದನ್ನು ಸ್ಥಗಿತಗೊಳಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಾಮಾನ್ಯಸಭೆಯಲ್ಲಿ ನಡೆದ ಚರ್ಚೆಯ ಎಲ್ಲಾ ವಿವರವನ್ನು ದಾಖಲಿಸಿಕೊಂಡು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲು ಸಭೆಯಲ್ಲಿ ಅಧ್ಯಕ್ಷರು ರೂಲಿಂಗ್ ಹೊರಡಿಸಿದರು.

ಸ್ಮಾಟ್೯ ಸಿಟಿ, ಕೊಳಚೆ ನೀರು:

ಒಂದೆಡೆ ಮಂಗಳೂರು ಸ್ಮಾಟ್೯ ಸಿಟಿ ಎನ್ನುತ್ತಾರೆ, ಅಲ್ಲಿನ ಜನತೆ ನೇತ್ರಾವತಿಯ ಕೊಳಚೆ ನೀರನ್ನು ಕುಡಿಯುವ ಪರಿಸ್ಥಿತಿ ಇದೆ. ಬಿ.ಮೂಡ ಗ್ರಾಮದಲ್ಲಿ ಸಮರ್ಪಕವಾದ ಒಳಚರಂಡಿ ಇಲ್ಲದೆ ಸುಮಾರು 12 ಕಡೆಗಳಲ್ಲಿ ಕೊಳಚೆ ನೀರು ನೇರವಾಗಿ ನೇತ್ರಾವತಿ ನದಿಯ ಒಡಲು ಸೇರುತ್ತಿದೆ. ಈ ಕೊಳಕು ನೀರು ಸ್ಮಾಟ್೯ಸಿಟಿ ಮಂಗಳೂರಿನ ಜನತೆ ಕುಡಿಯಬೇಕಾ? ಎಂದು ಪ್ರಶ್ನಿಸಿದ ಗೋವಿಂದ ಪ್ರಭು ಮಂಡಳಿಯು ಮೊದಲ ಹಂತ ಬಿ.ಮೂಡದಲ್ಲಿ ಒಳಚರಂಡಿ ಕಾಮಗಾರಿ ಮಾಡದೇ ಬಂಟ್ವಾಳದಲ್ಲಿ ಆರಂಭಿಸಿದರೆ ಏಕಾಂಗಿಯಾದರೂ ಸರಿ ತಾನು ಧರಣಿ ಕೂರುತ್ತೆನೆ ಎಚ್ಚರಿಸಿದರಲ್ಲದೆ ಇದರಲ್ಲಿ ಯಾವುದೇ ರಾಜಿ ಇಲ್ಲ ಹಲವು ವರ್ಷದಿಂದ ಇದಕ್ಕಾಗಿ ಹೋರಾಟ ಮಾಡುತ್ತಾ ಇದ್ದೆನೆ ಎಂದು ಸಭೆಯ ಗಮನಕ್ಕೆ ತಂದರು.

ಧ್ವನಿಗೂಡಿಸಿದ ಸದಸ್ಯ ಸಿದ್ದೀಕ್

ಪಾಣೆಮಂಗಳೂರು, ಮೆಲ್ಕಾರ್, ಗುಡ್ಡೆಯಂಗಡಿ ಮೊದಲಾದೆಡೆಯ ಜನತೆ ಸದ್ಯ ಕೊಳಚೆ ನೀರನ್ನೇ ಕುಡಿಯುವಂತಾಗಿದೆ ಎಂದಾಗ, ಇಲ್ಲಿನ ನೀರು ಕುಡಿಯುಲು ಯೋಗ್ಯವಲ್ಲ ಎಂಬ ವರದಿ ಬಂದಿದೆ ಎಂದು ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮಾಹಿತಿ ನೀಡಿದರು.

ಆಸ್ತಿತೆರಿಗೆಯಲ್ಲಿ ಹೆಚ್ಚಳ:

ಪುರಸಭಾ ವ್ಯಾಪ್ತಿಯ ಜನರಿಗೆ ಆಸ್ತಿತೆರಿಗೆಯಲ್ಲಿ ಪ್ರಸಕ್ತ ಸಾಲಿಗೆ ಶೇ.3 ರಷ್ಟು ಹೆಚ್ಚಿಸಿ ಸಾಮಾನ್ಯ ಸಭೆ ತೀರ್ಮಾನ ಕೈಗೊಂಡಿದೆ.

ಅತಿಕ್ರಮಣ ತೆರವುಗೆ ಪತ್ರ:

ಕಂಚಿನಡ್ಕಪದವಿನಲ್ಲಿರುವ ಪುರಸಭೆಯ ತ್ಯಾಜ್ಯವಿಲೇವಾರಿ ಘಟಕದ ಸುತ್ತ ಬಫರ್ ಝೋನ್ ಒಳಗಡೆ ಅತಿಕ್ರಮಿಸಿರುವುದನ್ನು ತೆರವುಗೊಳಿಸುವಂತೆ ಸದಸ್ಯ ಗೋವಿಂದ ಪ್ರಭು ಅವರ ಪತ್ರದ ಹಿನ್ನಲೆಯಲ್ಲಿ ಚರ್ಚಿಸಲಾಯಿತು.ಆರಂಭಿಕ ಹಂತದಲ್ಲಿ ಇದ್ದ 7 ಮನೆಗಳು ಈಗ 32 ಮನೆಗಳಾಗಿವೆ. ಶಾಲೆ, ಅಂಗನವಾಡಿ ಹಾಗೂ ಮನೆಯವರಿಗೆ ಪ್ರತ್ಯೇಕ ನಿವೇಶನ ಸೂಚಿಸಲಾಗಿದ್ದರೂ ಇನ್ನು ತೆರವು ಆಗಿಲ್ಲ, ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಈ ಬಗ್ಗೆ ತಹಶೀಲ್ದಾರರಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.

ದಾಖಲೆಗಾಗಿ ಬೇಡಿದ ಪ್ರಭು:

ಪುರಸಭೆಯಲ್ಲಿ ಸದಸ್ಯನ ನೆಲೆಯಲ್ಲಿ ಯಾವುದೇ ದಾಖಲೆಪತ್ರ ಕೇಳಿದರೂ ಕೋಡುತ್ತಾ ಇಲ್ಲ, ಪುರಸಭೆಯಲ್ಲಿ ಯಾವುದೇ ದಾಖಲೆಪತ್ರ ಸಿಗುತ್ತಿಲ್ಲ ಅಂದರೆ ಏನರ್ಥ, ಕ.ನ.ನೀ.ಸ.ಮತ್ತು ಒ.ಚ.ಮಂಡಳಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ದಯಾಮಾಡಿ ದಾಖಲೆಪತ್ರ ಕೋಡಿ ಎಂದು ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಅವರಲ್ಲಿ ಕೈ ಮುಗಿದು ಸದಸ್ಯ ಗೋವಿಂದಪ್ರಭು ಅವಲತ್ತುಕೊಂಡ ಪ್ರಸಂಗ ನಡೆಯಿತು.

ತೆಗೆದು ಬಿಸಾಡಲಾಗಿದೆ:

ಇದೆಡ ವೇಳೆ ವಿಚಾರವೊಂದಕ್ಕೆ ಚರ್ಚೆ ನಡೆಯುತ್ತಿದ್ದಾಗ ಸದಸ್ಯ ರಾಮಕೃಷ್ಣ ಆಳ್ವ ಅವರು ಪತ್ರವ್ಯವಹಾರವೇ ಎಂದು ಹಾಸ್ಯಚಟಾಕಿ ಹಾರಿಸಿದಾಗ ನಮ್ಮಲ್ಲಿ ಅಂತದ್ದೇನು ಇಲ್ಲ ತೆಗೆದು ಬಿಸಾಕುವುದೇ ಎಂದು ಗೋವಿಂದ ಪ್ರಭು ಅವರು ಪರೋಕ್ಷವಾಗಿ ಶಾಸಕ ಬಸವರಾಜ್ ಯತ್ನಾಳ್ ಅವರು ಪಕ್ಷದಿಂದ ಉಚ್ಚಾಟಿಸಿರುವುದನ್ನು ಹೇಳುವಮೂಲಕ ತಿರುಗೇಟು ನೀಡಿದರು.

ಬಜೆಟ್ ಸಮರ್ಥನೆ:

ಇತ್ತೀಚೆಗೆ ಮಂಡಿಸಲಾದ ಬಜೆಟ್ ನಲ್ಲಾದ ಲೋಪವನ್ನು ಸರಿಪಡಿಸಲಾಗಿದೆಯೆ ಎಂದು ಸದಸ್ಯ ಹರಿಪ್ರಸಾದ್ ಪ್ರಶ್ನಿಸಿದಾಗ ಮುಖ್ಯಾಧಿಕಾರಿಯವರು ಮತ್ತೆ ಸಮರ್ಥಿಸಿಕೊಂಡರು.

ಉಪಾಧ್ಯಕ್ಷ ಮೋನೀಶ್ ಆಲಿ ಉಪಸ್ಥಿತರಿದ್ದರು. ಮೆನೇಜರ್ ರಜಾಕ್, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಸಿಬ್ಬಂದಿ ಉಮಾವತಿ, ರಮಣಿ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article