
ದಿಗಂತ್ ನಾಪತ್ತೆ: ಹೈಕೋಟ್೯ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲು?
ಬಂಟ್ವಾಳ: ಫರಂಗಿಪೇಟೆ ಸಮೀಪದ ಕಿದೆಬೆಟ್ಟು ಪದ್ಮನಾಭ ಮಡಿವಾಳ ಅವರ ಮಗ ಪಿಯುಸಿ ವಿದ್ಯಾರ್ಥಿ ದಿಗಂತ್ ಅವರ ನಿಗೂಢ ನಾಪತ್ತೆಯಾಗಿ 10 ದಿನಗಳಾದರೂ ಇನ್ನೂ ಸುಳಿವು ಸಿಗದಿದ್ದು,ಈ ಮಧ್ಯೆ ಮಂಗಳೂರಿನ ವ್ಯಕ್ತಿಯೋರ್ವರು ಸ್ವಯಂಪ್ರೇರಿತವಾಗಿ ರಾಜ್ಯ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಡಾ. ಭಟ್ ಭೇಟಿ:
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಆರ್‌ಎಸ್‌ಎಸ್ ಪ್ರಮುಖರಾದ ಡಾ. ಪ್ರಭಾಕರ ಭಟ್ ಅವರು ನಾಪತ್ತೆಯಾದ ದಿಗಂತ್ ಮನೆಗೆ ಭೇಟಿ ನೀಡಿ ಹೆತ್ತವರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ವಿ.ಹಿಂ.ಪ. ತಾಲೂಕು ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ, ಸ್ಥಳೀಯ ಪ್ರಮುಖರಾದ ವಿನೋದ್ ಕೊಡ್ಮಾಣ್, ಕಿರಣ್ ಕುಮ್ಡೇಲು, ದಿನೇಶ್ ಶೆಟ್ಟಿ ಕೊಟ್ಟಿಂಜ ಮೊದಲಾದವರಿದ್ದರು.
ಇದೇ ವೇಳೆ ತನಿಖೆಯ ಹಿನ್ನಲೆಯಲ್ಲಿ ಮನೆ ಪರಿಸರದಲ್ಲಿ ಸ್ಥಳಮಹಜರು ನಡೆಸಿದ್ದು,ಪೊಲೀಸರ ತನಿಖೆಗೆ ದಿಗಂತ್ ಪೋಷಕರು ಮತ್ತು ಮನೆಯವರು ನಾಪತ್ತೆಯಾದಂದಿನ ದಿನಗಳಿಂದಲು ಸೂಕ್ತವಾಗಿ ಸ್ಪಂದಿಸುತ್ತಿದ್ದರೂ ಪೊಲೀಸ್ ಅಧಿಕಾರಿಯೋರ್ವರು ಮನೆಯವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ತನ್ನ ಮೇಲಾಧಿಕಾರಿಯವರಲ್ಲಿ ದೂರಿದ್ದಾರೆ ಎಂದು ಆರೋಪಿಸಲಾಗಿದೆ.
ಬುಧವಾರ ವಿಧಾನಸಭಾ ಕಲಾಪದಲ್ಲಿಯು ದಿಗಂತ್ ನಾಪತ್ತೆ ಪ್ರಕರಣ ಪ್ರತಿಧ್ವನಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರ ಮೇಲುಸ್ತುವಾರಿಯಲ್ಲಿ ನಾಲ್ಕು ಪೊಲೀಸ್ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಶೀಘ್ರವೇ ಪತ್ತೆ ಹಚ್ಚುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.