
ಅಕ್ಷರ ದಾಸೋಹ ನೌಕರರಿಗೆ 6000 ರೂ. ಮಾಸಿಕ ಗೌರವ ಧನವನ್ನು ನೀಡಬೇಕು: ಭವ್ಯ
Wednesday, March 5, 2025
ಮಂಗಳೂರು: ರಾಜ್ಯ ಸರಕಾರವು ಚುನಾವಣಾ ಭರವಸೆಯಂತೆ 6000 ರೂ. ಮಾಸಿಕ ಗೌರವ ಧನ ವೇತನವನ್ಮು ನೀಡಬೇಕೆಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ರಿ) ಸಿಐಟಿಯುನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷೆ ಭವ್ಯ ಒತ್ತಾಯಿಸಿದರು.
ಅವರು ಮಾ.5 ರಂದು ಮಂಗಳೂರು ತಾಲೂಕು ಪಂಚಾಯತು ಕಚೇರಿ ಮುಂದುಗಡೆ ನಡೆದ ಅಕ್ಷರ ದಾಸೋಹ ನೌಕರರ ಬ್ರಹತ್ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಆರು ವರ್ಷಗಳಿಂದ ಬಿಸಿಯೂಟ ನೌಕರರಿಗೆ ವೇತನ ಏರಿಕೆಯಾಗಿಲ್ಲ. ಕೇಂದ್ರ ಸರಕಾರವು 2014ರಿಂದ ಅನುದಾನವನ್ನು ಏರಿಕೆ ಮಾಡಲಿಲ್ಲ. ಎರಡು ಸರಕಾರಗಳು ಬಿಸಿಯೂಟ ನೌಕರರನ್ನು ಶೋಷಣೆ ಮಾಡುತ್ತಾ ನೌಕರರನ್ನು ಹಿಂಸಿಸುತ್ತಿದೆ. ಎಲ್ಲಾ ಆಹಾರವಸ್ತುಗಳ ದರವನ್ನು ಏರಿಕೆ ಮಾಡಿದೆ. ಆದರೆ ಮಾಸಿಕ ವೇತನ ಏರಿಕೆಗಾಗಿ ಇಲಾಖೆಗೆ ಹಣವೇ ನೀಡುತ್ತಿಲ್ಲವೆಂದು ಅವರು ಆರೋಪಿಸಿದರು. ಕೇರಳ, ಪಾಂಡಿಚೇರಿ, ಹರಿಯಾಣ, ತಮಿಳಾನಾಡಿನಂತೆ 7000 ರೂ.ನಿಂದ 12000 ವೇತನ ನೀಡಬೇಕೆಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು. ರಾಜ್ಯ ಸರಕಾರವು ಈಗಾಗಲೇ ಒಪ್ಪಿಕೊಂಡಂತೆ ನಿವೃತ್ತಿಯಾದ ನೌಕರರಿಗೆ ಇಡಿಗಂಟು ನೀಡಲೇಬೇಕು ಎಂದರು.
ಬಿಸಿಯೂಟ ನೌಕರರಿಗೆ ಬೇಸಿಗೆ ಮತ್ತು ದಸರಾ ರಜೆಗಳ ವೇತನ ನೀಡಬೇಕು ಎಂದು ಸಂಘದ ಗೌರವ ಅಧ್ಯಕ್ಷೆ ಪದ್ಮಾವತಿ ಶೆಟ್ಟಿಯವರು ಹೇಳಿದರು. ಬಿಸಿಯೂಟ ಯೋಜನೆಯನ್ನು ಯಾವುದೆ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು ಮಾತ್ರವಲ್ಲದೆ ಹಾಜರಾತಿಯ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಜ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು. ಶಭಾನಾ ವಂದಿಸಿದರು.
ರಾಜ್ಯದಾದ್ಯಂತ ಸಿಐಟಿಯು ನೇತೇತ್ವದ ಬಿಸಿಯೂಟ ನೌಕರರ ಸಂಘವು ಮಾರ್ಚ್ 4, 5 ರಂದು ಬಿಸಿಯೂಟ ನೌಕರರು ಮುಷ್ಕರ ನಡೆಸಲು ಕರೆ ನೀಡಿರುವ ಹಿನ್ನಲೆಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಸಂಘದ ಮುಂದಾಳುಗಳಾದ ಶಭಾನಾ ಭಾನು, ಹರಿವಣಿ, ಅನಿತಾ, ಉಮಾವತಿ, ಹರಿಣಾಕ್ಷಿ ಮತ್ತಿತರರು ವಹಿಸಿದ್ದರು.