
ಘನವಾಹನ ನಿರ್ಬಧಿಸಲಾದ ಪೊಳಲಿ ಸೇತುವೆಯಲ್ಲಿ ರಾತ್ರಿ ಲಾರಿಸಂಚಾರ
Wednesday, March 5, 2025
ಬಂಟ್ವಾಳ: ಘನವಾಹನ ನಿರ್ಬಂಧಿಸಿರುವ ಪೊಳಲಿ-ಅಡ್ಡೂರು ಸೇತುವೆಯಲ್ಲಿ ರಾತ್ರಿ ಹೊತ್ತಿನಲ್ಲಿ ರಾಜಾರೋಷವಾಗಿ ಘನ ವಾಹನಗಳು ಸಂಚರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ತ್ ವೈರಲ್ ಆಗುತ್ತಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಪೊಳಲಿ, ಅಡ್ಡೂರು ಭಾಗದ ನಾಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪೊಳಲಿ ಸೇತುವೆಯನ್ನು ಹಗಲು ಹೊತ್ತು ಬಂದ್ ಮಾಡಿ, ರಾತ್ರಿ ವ್ಯವಹಾರ ಕುದುರಿಸುವ ಅಧಿಕಾರಿಗಳಿಗೆ ಧಿಕ್ಕಾರವಿರಲಿ?.. ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿರುವ ಆಡಳಿತ ವರ್ಗ.. ಜಿಲ್ಲಾಧಿಕಾರಿಯವರೇ, ಈ ವ್ಯವಹಾರಕ್ಕೆ ನೇರ ನೀವೇ ಹೊಣೆ?. ನಾಟಕ ನಿಲ್ಲಿಸಿ,.. ಶಾಲಾ ವಾಹನಗಳಿಗೆ, ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಘನವಾಹನಕ್ಕು ಹಗಲು ಹೊತ್ತು ಸೇತುವೆಯನ್ನು ತೆರವುಗೊಳಿಸಿ? ಈ ರೀತಿಯ ಬರಹದ ಸಂದೇಶ ಹಾಗೂ ಲಾರಿಯೊಂದು ಸೇತುವೆ ಮೂಲಕ ಯಾರ ಭಯವಿಲ್ಲದೆ ಸಂಚರಿಸುವ ವೀಡಿಯೋವನ್ನು ಇಲ್ಲಿನ ಸ್ಥಳೀಯ ನಿವಾಸಿ ಹೆಸರು ಸಹಿತ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದು ಇದೀಗ ಸಖತ್ ವೈರಲ್ ಆಗುತ್ತಿದೆ.
ಪ್ರಸ್ತುತ ದುರಸ್ಥಿಕಾರ್ಯ ನಡೆಯುತ್ತಿರುವ ಪಲ್ಗುಣಿ ನದಿ ಅಡ್ಡಲಾಗಿ ನಿರ್ಮಿಸಲಾದ ಪೊಳಲಿ-ಅಡ್ಡೂರು ಸೇತುವೆ ಸಾಮಾರ್ಥ್ಯ ಕುಸಿದಿದೆ ಎಂಬ ಹಿನ್ನಲೆಯಲ್ಲಿ ಘನ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ. ಸೇತುವೆಯ ಎರಡು ತುದಿಯಲ್ಲಿ ಪೊಲೀಸ್ ಚೌಕಿಯನ್ನು ನಿರ್ಮಿಸಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದಲ್ಲದೆ ಘನ ವಾಹನ ಸಂಚರಿಸದಂತೆ ಗೇಟ್ ಅಳವಡಿಸಲಾಗಿತ್ತು.
ಆದರೆ ಜಿಲ್ಲಾಡಳಿತದ ಅದೇಶ ಕೇವಲ ಹಗಲು ಹೊತ್ತು ಸಂಚರಿಸುವ ಬಡಪಾಯಿಗಳು ದುಡಿದು ತಿನ್ನುವ ವಾಹನಸವಾರರಿಗೆ ಮಾತ್ರ ಅನ್ವಯಿಸುತ್ತಿದೆ ಎಂಬ ಗಂಭೀರ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದ್ದು, ರಾತ್ರಿ ವೇಳೆಯಲ್ಲಿ ಅಕ್ರಮ ಮರಳು ವಾಹನಗಳು ಸಹಿತ ಘನ ವಾಹನಗಳ ಸಂಚರಿಸುವ ಬಗ್ಗೆ ಸ್ಥಳೀಯರಲ್ಲಿದ್ದ ಅನುಮಾನಕ್ಕೆ ಇದೀಗ ಸೇತುವೆಯಲ್ಲಿ ಸಂಚರಿಸುವ ಘನವಾಹನದ ವೀಡಿಯೋ ಪುಷ್ಠಿ ನೀಡಿದೆ.
ಜಿಲ್ಲಾಡಳಿತ ಮತ್ರು ಪೊಲೀಸ್ ಅಧಿಕಾರಿಗಳ ಈ ಇಬ್ಬಗೆ ನೀತಿಯ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನಕ್ಕು, ವೈರಲ್ ಆಗಿರುವ ಈ ವೀಡಿಯೋ ವ್ಯಾಪಕ ಚರ್ಚೆಗೂ ಕಾರಣವಾಗಿದೆ.