
ಕರಾವಳಿಯಲ್ಲಿ ಮಳೆ ಸಾಧ್ಯತೆ
ಮಂಗಳೂರು: ಕಳೆದ ಒಂದು ವಾರದಿಂದ ಕರಾವಳಿ ಭಾಗದಲ್ಲಿ ತಾಪಮಾನದಲ್ಲಿ ವಿಪರೀತ ಏರಿಕೆಯಾಗುತ್ತಿದ್ದು, ಮುಂದಿನ 1-2 ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಹಗುರ ಮಳೆಯಾಗಲಿದೆ. ರಾಜ್ಯದ ಉಳಿದೆಡೆ ಒಣ ಹವೆ ಇರಲಿದೆ. ಮುಂದಿನ 5 ದಿನಗಳವರೆಗೆ ಕರ್ನಾಟಕದ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ, ದಕ್ಷಿಣ ಒಳನಾಡಿನಲ್ಲಿ 1-2 ಡಿ.ಸೆ ಮತ್ತು ಕರಾವಳಿ ಕರ್ನಾಟಕದಾದ್ಯಂತ ಸಾಮಾನ್ಯಕ್ಕಿಂತ ಒಂದೆರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಗರಿಷ್ಠ 38.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ, ಗರಿಷ್ಠ ಪ್ರಮಾಣದ ಬಿಸಿ ವಾತಾವರಣ ಕಂಡುಬಂದಿದೆ. ಬುಧವಾರ ದ.ಕ, ಉಡುಪಿ ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣವಿದ್ದು, ಸೆಖೆಯ ಅನುಭವ ಹೆಚ್ಚಾಗಲಿದೆ. ಗರಿಷ್ಠ ತಾಪಮಾನದಲ್ಲಿ ಒಂದೆರಡು ಡಿಗ್ರಿ ಇಳಿಕೆಯಾದರೂ, ಅಧಿಕ ತೇವಾಂಶದಿಂದ ಸೆಖೆ ಹೆಚ್ಚಾಗಬಹುದು. ದಕ್ಷಿಣ ಶ್ರೀಲಂಕಾ ಕರಾವಳಿ ಬಳಿಯಿರುವ ಗಾಳಿಯ ತಿರುಗುವಿಕೆಯು ಶ್ರೀಲಂಕಾದ ಆಗ್ನೇಯಕ್ಕೆ ಚಲಿಸಿ ಶಿಥಿಲಗೊಳ್ಳುವ ಲಕ್ಷಣಗಳಿವೆ. ಇದರ ಪರಿಣಾಮದಿಂದ ಬಂಗಾಳಕೊಲ್ಲಿಯ ಭಾಗದಿಂದ ಆಂದ್ರಾ ಮೂಲಕ ರಾಜ್ಯಕ್ಕೆ ಬೀಸುತ್ತಿರುವ ಗಾಳಿಯ ಪ್ರಮಾಣವೂ ಕಡಿಮೆಯಾಗಲಿದ್ದು, ಮುಂದಿನ 3 ದಿನಗಳ ಬಳಿಕ ಮಳೆಯ ಸಾಧ್ಯತೆ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದಾರೆ.