ಜನರಿಗೆ ಸಮಸ್ಯೆಯಾಗಿಯೇ ಉಳಿದ ಕ.ನ.ನೀ.ಸ. ಮತ್ತು ಒ.ಚ.ಮಂಡಳಿಯ ಕಾಮಗಾರಿ: ಬಂಟ್ವಾಳ ಪುರಸಭೆಯಲ್ಲಿ ಸದಸ್ಯರ ಆಕ್ರೋಶ

ಜನರಿಗೆ ಸಮಸ್ಯೆಯಾಗಿಯೇ ಉಳಿದ ಕ.ನ.ನೀ.ಸ. ಮತ್ತು ಒ.ಚ.ಮಂಡಳಿಯ ಕಾಮಗಾರಿ: ಬಂಟ್ವಾಳ ಪುರಸಭೆಯಲ್ಲಿ ಸದಸ್ಯರ ಆಕ್ರೋಶ


ಬಂಟ್ವಾಳ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನಡೆಸಲಾದ ಅರೆಬರೆ, ಅಸಮರ್ಪಕವಾದ ಎರಡು ಪ್ರಮುಖ ಕಾಮಗಾರಿ ಜನರಿಗೆ ಸಮಸ್ಯೆಯಾಗಿಯೇ ಉಳಿದಿರುವುದು ಗುರುವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತಲ್ಲದೆ ಸದಸ್ಯರು ಪಕ್ಷಬೇಧ ಮರೆತು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭಾಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ ಅವರು ಸಾಮಾನ್ಯ ಸಭೆ ಸಭಾಧ್ಯಕ್ಷತೆ ವಹಿಸಿದ್ದು, ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಯ ಅಸಮರ್ಪಕ ಕಾಮಗಾರಿಯ ಬಗ್ಗೆ ವಿಪಕ್ಷ ಬಿಜೆಪಿ ಸದಸ್ಯರು ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆಗೆ ಒತ್ತಾಯಿಸಿದರೆ, ಆಡಳಿತ ಸದಸ್ಯರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳಲು ಹಠಕ್ಕೆ ಬಿದ್ದರು.

ಡಿ.ಸಿ.ಬಳಿ ಸರ್ವಪಕ್ಷದ ನಿಯೋಗ:

ಬಂಟ್ವಾಳ ಪುರಸಭೆಯ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯ ಅಸಮರ್ಪಕ ನಿರ್ವಹಣೆ, ಸಮಸ್ಯೆಯ ಕುರಿತಂತೆ ಕ.ನ.ನೀ.ಸ. ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿ, ಕಾಮಗಾರಿಯಲ್ಲಿನ ಲೋಪದೋಷವನ್ನು ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಸದಸ್ಯರು ಪಕ್ಷಾತೀತವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಧ್ಯಪ್ರವೇಶಿಸಿದ ಅಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ ಅವರು ಕುಡಿಯುವ ನೀರಿನ ಸಮಸ್ಯೆಯ ಕುರಿತಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕು ತರಲಾಗಿದ್ದು, ಇದಕ್ಕೆ ಸ್ಪಂದಿಸಿರುವ ಸಚಿವರು ಮಂಡಳಿಯ ಅಧಿಕಾರಿಗಳಿಗೂ ಪತ್ರ ಬರೆದು ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದಾರೆ ಎಂದರು.

ನೇತ್ರಾವತಿ ನದಿ ಪುರಸಭೆಯ ಮುಂಭಾಗದಲ್ಲೇ ಹರಿಯುತ್ತಿದ್ದರೂ ಜನಸಾಮಾನ್ಯರಿಗೆ ಇನ್ನೂ ಕೂಡ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ, ಕಳೆದ ನಾಲ್ಕು ವರ್ಷದಿಂದ ಈ ಸಮಸ್ಯೆ ಚರ್ಚೆಗೆ ಸೀಮಿತವಾಗಿದೆ ಹೊರತು ಇದನ್ನು ಬಗೆಹರಿಸಲು ಸಾಧ್ಯವಾಗಿಲ್ಲ, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡೋಣ ಎಂದರೆ ಸಂಬಂಧಿಸಿದ ದಾಖಲೆಪತ್ರವನ್ನು ನೀಡುತ್ತಿಲ್ಲ, ಇದು ಪುರಸಭಾ ವ್ಯಾಪ್ತಿ 40 ಸಾವಿರ ಜನರ ಪ್ರಶ್ನೆಯಾಗಿದೆ, ಇದರಲ್ಲಿ ಯಾವುದೇ ರಾಜಕಾರಣದ ಮಾತೇ ಇಲ್ಲ ಎಂದು ಸದಸ್ಯ ಗೋವಿಂದಪ್ರಭು ಆಕ್ರೋಶ ವ್ಯಕ್ತಪಡಿಸಿದರು.

ನೀರಿನ ಸಮಸ್ಯೆಯ ಬಗ್ಗೆ ದಿನನಿತ್ಯಪುರಸಭೆಗೆ ಕರೆಗಳು ಬರುತ್ತಿವೆ. ತಾನು ಈ ಹಿಂದೆ ಮುಖ್ಯಾಧಿಕಾರಿಯಾಗಿದ್ದಾಗಿನಿಂದ ಈ ಸಮಸ್ಯೆಯಿದ್ದು, ಇದಕ್ಕೊಂದು ಅಂತ್ಯಹಾಡುವ ಅಗತ್ಯವಿದೆ ಎಂದು ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸಭೆಯ ಗಮನಕ್ಕೆ ತಂದರು.

ಸದಸ್ಯರಾದ ಹರಿಪ್ರಸಾದ್, ರಾಮಕೃಷ್ಣ ಆಳ್ವ, ಸಿದ್ದೀಕ್ ಗುಡ್ಡೆಯಂಗಡಿ, ಮಹಮ್ಮದ್ ಶರೀಫ್ ಮೊದಲಾದವರು ಈ ಚರ್ಚೆಯಲ್ಲಿ ಪಾಲ್ಗೊಂಡರು.

ಕೆಲ ದಿನಗಳಹಿಂದೆ ಇಂಜಿನಿಯರ್ ಗಳ ತಂಡವೊಂದು ಈ ವಿಚಾರವಾಗಿ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಮುಖ್ಯಾಧಿಕಾರಿಯವರು ಸಭೆಯ ಗಮನಕ್ಕೆ ತಂದರು.ಆಗ ನಮ್ಮ ಗಮನಕ್ಕೆ ತಂದಿದ್ದರೆ ಸಮಸ್ಯೆಯನ್ನು ವಿವರಿಸಬುಹುದಿತ್ತು ಎಂದು ಪ್ರಭು ಹೇಳಿದರು. ಲೋಕಾಯುಕ್ತಕ್ಕೆ ದೂರು ನೀಡಿದರೆ ಪ್ರಯೋಜನವಿಲ್ಲ, ಮುಂದಿನ ವಾರವೇ ಜಿಲ್ಲಾಧಿಕಾರಿ ಬಳಿ ಸರ್ವಪಕ್ಷದ ನಿಯೋಗ ತೆರಳಿ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದು ಸೂಕ್ತ ಎಂದು ಸದಸ್ಯ ಮಹಮ್ಮದ್ ನಂದರಬೆಟ್ಟು ಸಲಹೆ ನೀಡಿದರು. ಈ ಮೂಲಕ ಮಂಡಳಿಗೆ ಕೊನೆಯದಾಗಿ ಅವಕಾಶ ನೀಡುವುದು ಇಲ್ಲದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡುವುದು ಎಂಬ ಅಭಿಪ್ರಾಯಕ್ಕೆ ಸಭೆ ಸಹಮತ ವ್ಯಕ್ತಪಡಿಸಿದ ಬಳಿಕ ಚರ್ಚೆಗೆ ತೆರೆಬಿತ್ತು.

ಉಪಾಧ್ಯಕ್ಷ ಮೋನೀಶ್ ಆಲಿ ಉಪಸ್ಥಿತರಿದ್ದರು. ಮೆನೇಜರ್ ರಜಾಕ್, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಸಿಬ್ಬಂದಿ ಉಮಾವತಿ, ರಮಣಿ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article