ಧರ್ಮಸ್ಥಳದ ಮೇಲಾಗುತ್ತಿರುವ ಸುಳ್ಳು ಆರೋಪ ಮತ್ತು ಷಡ್ಯಂತ್ರದ ವಿರುದ್ಧ ಗ್ರಾಮಸ್ಥರ ಸಮಾವೇಶ

ಧರ್ಮಸ್ಥಳದ ಮೇಲಾಗುತ್ತಿರುವ ಸುಳ್ಳು ಆರೋಪ ಮತ್ತು ಷಡ್ಯಂತ್ರದ ವಿರುದ್ಧ ಗ್ರಾಮಸ್ಥರ ಸಮಾವೇಶ


ಉಜಿರೆ: ಧರ್ಮಸ್ಥಳದ ಮೇಲಾಗುತ್ತಿರುವ ಸುಳ್ಳು ಆರೋಪ ಮತ್ತು ಷಡ್ಯಂತ್ರದ ವಿರುದ್ಧ ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆಯ ಆಶ್ರಯದಲ್ಲಿ ಗುರುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಗ್ರಾಮಸ್ಥರ ಸಮಾವೇಶ ಆಯೋಜಿಸಲಾಯಿತು.


ಧರ್ಮಸ್ಥಳದ ಭಕ್ತರು ಮತ್ತು ಅಭಿಮಾನಿಗಳು ಕೂಡಾ ಸಮಾವೇಶದಲ್ಲಿ ಭಾಗವಹಿಸಿದರು.


ಧರ್ಮಸ್ಥಳದ ಎಲ್ಲಾ ವ್ಯಾಪಾರಸ್ಥರು, ವಾಹನಗಳ ಚಾಲಕರು ಮತ್ತು ಮಾಲಕರು ಗುರುವಾರ ಸ್ವಯಂಪ್ರೇರಿತ ಬಂದ್ ಆಚರಿಸಿ ಸಮಾವೇಶದಲ್ಲಿ ಭಾಗವಹಿಸಿದರು.


ಪೂರ್ವಭಾವಿಯಾಗಿ ನೇತ್ರಾವತಿ ನದಿಯಲ್ಲಿ ಸ್ನಾನಮಾಡಿ, ಅಣ್ಣಪ್ಪಸ್ವಾಮಿ ಬೆಟ್ಟದ ಎದುರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಎಲ್ಲರೂ ಪಾದಯಾತ್ರೆ ಮೂಲಕ ಅಮೃತವರ್ಷಿಣಿ ಸಭಾಭವನಕ್ಕೆ ಹೋದರು.


ಅಲ್ಲಿ ಹಿರಿಯರಾದ ಪರಪ್ಪೆ ನಾರಾಯಣ ರಾವ್ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಸಲಾಯಿತು.


ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೇಶವ ಗೌಡ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇತರ ಮಾಧ್ಯಮಗಳಲ್ಲಿ ಆಧಾರರಹಿತ ಸುಳ್ಳು ಆರೋಪಗಳನ್ನು ಪಸರಿಸುತ್ತಿದ್ದು ಕ್ಷೇತ್ರದ ಘನತೆ, ಗೌರವಕ್ಕೂ, ಊರಿನ ನಾಗರಿಕರಿಗೂ ತೀವ್ರ ಆತಂಕ ಹಾಗೂ ಬೇಸರವಾಗಿದೆ. ಸುಸಂಸ್ಕೃತರಾದ ಎಲ್ಲಾ ನಾಗರಿಕರು ಇಷ್ಟರ ತನಕ ಮೌನದಿಂದ ಎಲ್ಲವನ್ನೂ ಸಹಿಸಿಕೊಂಡು, ಈಗ ತಾಳ್ಮೆಯ ಕಟ್ಟೆ ಒಡೆದಿದೆ. ೧೫ ದಿನಗಳೊಳಗೆ ಅಪಪ್ರಚಾರ ಮಾಡುವವರಿಗೆ ತಕ್ಕ ಶಾಸ್ತಿ ಆಗಬೇಕು. ಅವರ ಅಪಪ್ರಚಾರವನ್ನು ನಿಲ್ಲಿಸಬೇಕು ಎಂದು ಎಲ್ಲರೂ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.


ಶ್ರೀನಿವಾಸ ರಾವ್ ಮಾತನಾಡಿ, ಸಾತ್ವಿಕ ಹೋರಾಟಕ್ಕೆ ಜಯ ಸಿಗಲಿ ಎಂದು ಹಾರೈಸಿ, ಈ ಬಗ್ಗೆ ಕಾನೂನಾತ್ಮಕ ಹೋರಾಟವನ್ನೂ ಮುಂದುವರಿಸಲಾಗುವುದು ಎಂದರು.


ಶಾಂಭವಿ ರೈ, ಅಖಿಲೇಶ್ ಶೆಟ್ಟಿ, ಸಂದೀಪ್ ರೈ ತಮ್ಮ ಅಭಿಪ್ರಾಯ, ಅನಿಸಿಕೆ ವ್ಯಕ್ತಪಡಿಸಿ ಧರ್ಮಸ್ಥಳದ ರಕ್ಷಣೆಗಾಗಿ ಮುಂದಿನ ಸಾತ್ವಿಕ ಹೋರಾಟದ ಧರ್ಮಯುದ್ಧಕ್ಕೆ ಎಲ್ಲರೂ ಸಜ್ಜಾಗಬೇಕು ಎಂದರು.

ಧನಕೀರ್ತಿ ಆರಿಗಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಮಲಾ, ಸಿ.ಎ. ಬ್ಯಾಂಕ್ ಅಧ್ಯಕ್ಷ ಪ್ರೀತಂ, ಪ್ರಭಾಕರ ಪೂಜಾರಿ, ರಾಜಾರಾಮ್, ಸುಂದರ ಗೌಡ, ಚಂದನ್‌ಪ್ರಸಾದ್ ಕಾಮತ್, ಭುಜಬಲಿ ಧರ್ಮಸ್ಥಳ ಮತ್ತಿತರರು ಉಪಸ್ಥಿತರಿದ್ದರು.

ಸಂದೇಶ್ ಸ್ವಾಗತಿಸಿದರು. ರಾಜಾರಾಮ್ ವಂದಿಸಿ, ಪೃಥ್ವೀಶ್ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article