ಮಾ.2 ರಂದು ಕಾರ್ಕಳಕ್ಕೆ ಡಿ.ಕೆ. ಶಿವಕುಮಾರ್

ಮಾ.2 ರಂದು ಕಾರ್ಕಳಕ್ಕೆ ಡಿ.ಕೆ. ಶಿವಕುಮಾರ್


ಕಾರ್ಕಳ: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾ.2ರಂದು ಕಾರ್ಕಳಕ್ಕೆ ಆಗಮಿಸುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿನ ಉತ್ಸಾಹ ಹೆಚ್ಚಿಸಿದೆ. ಡಿ.ಕೆ.ಶಿವಕುಮಾರ್ ಅವರು ಕೇವಲ ಕನಕಪುರದ ಬಂಡೆಯಲ್ಲ ಬದಲಾಗಿ ರಾಜ್ಯದ ಬಂಡೆ ಎನ್ನುವಂತಹ ಬಿರುದನ್ನು ಕಾರ್ಯಕ್ರಮದಲ್ಲಿ ಅವರಿಗೆ ನೀಡಲಿದ್ದೇವೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಹೇಳಿದರು. 

ಅವರು ಮಾ. 2ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮದ ಕುರಿತು ಫೆ. 28ರಂದು ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.  

ಕಾರ್ಕಳದಲ್ಲಿ ಶಾಸಕರಾಗಿ ಪ್ರತಿನಿಧಿಸಿ 50 ವರ್ಷ ಪೂರೈಸಿರುವ ಡಾ. ಎಂ. ವೀರಪ್ಪ ಮೊಯ್ಲಿಯವರಿಗೆ ಸನ್ಮಾನ ಕುಟುಂಬೋತ್ಸವ ಕಾರ್ಯಕ್ರಮದ ವಿಶೇಷತೆಯಾಗಿದೆ. ಇದರೊಂದಿಗೆ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್‌ನ ನೂತನ ಅಧ್ಯಕ್ಷರುಗಳು, ಬೂತ್ ಮತ್ತು ವಿವಿಧ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ, ಪಕ್ಷದ ಹಿರಿಯರಿಗೆ ಅಭಿನಂದನೆ ಮತ್ತು ವಿವಿಧ ಸಂಘ ಸಂಸ್ಥೆಗಳಿಗೆ ಸಹಾಯಧನ ವಿತರಣೆ ನಡೆಯಲಿದೆ ಎಂದರು. 

ರಾಜ್ಯಾಧ್ಯಕ್ಷರೇ ಬ್ಲಾಕ್ ಕಾರ್ಯಕರ್ತರ ಪದಗ್ರಹಣದಲ್ಲಿ ಭಾಗವಹಿಸುವುದು ಕಾರ್ಕಳದಲ್ಲೇ ಮೊದಲು. ಈ ನಿಟ್ಟಿನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಿದ್ದು, 209 ಬೂತ್‌ಗಳು, ಕಾರ್ಕಳ ಬ್ಲಾಕ್ ವ್ಯಾಪ್ತಿಯ 23 ಗ್ರಾಮೀಣ ಸಮಿತಿ ಅಧ್ಯಕ್ಷರ ಸಭೆಯೊಂದಿಗೆ ಪೂರ್ವಸಿದ್ಧತೆ ನಡೆಸಲಾಗಿದೆ. ಸುಮಾರು 10-15 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

ವಿವಿಧ ಧರ್ಮದ, ವಿವಿಧ ಭಾಷೆಯ, ವಿವಿಧ ಆಚರಣೆಗಳನು ಮಾಡುವ, ವಿವಿಧ ವರ್ಗದ ಜನರು ಒಂದು ಕುಟುಂಬ ಎನ್ನುವಂತಹ ಒಳ್ಳೆಯ ಸಂದೇಶವನ್ನು ಇಡೀ ರಾಜ್ಯಕ್ಕೆ ಸಾರುವಂತಹ ನಿಟ್ಟಿನಲ್ಲಿ ಕಾರ್ಕಳದಲ್ಲಿ ಆಯೋಜಿಸಿರುವ ಕಾರ್ಯಕ್ರಮವೇ ಕಾಂಗ್ರೆಸ್ ಕುಟುಂಬೋತ್ಸವ. ಮಧ್ಯಾಹ್ನ 2.30 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಶರತ್ ಬಚ್ಚೇಗೌಡ, ಎರಡು ಉಭಯ ಜಿಲ್ಲೆಗಳ ಮಾಜಿ ಸಚಿವರುಗಳು, ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕಾರ್ಕಳದ ಕಲಾವಿದರಿಂದ ಒಂದು ಗಂಟೆಗಳ ಅವಧಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ ಅವರು ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಮತ್ತು ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪೂರಕವಾಗಲಿದೆ ಎಂದರು. 

ಯಾರಾದರೂ ಪಕ್ಷ ಸೇರ್ಪಡೆಯಾಗಲಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶುಭದ್ ರಾವ್, ಪಕ್ಷ ಸೇರ್ಪಡೆಯಿದೆ ಆದರೆ, ಆವರ ಹೆಸರನ್ನು ಅಂದೇ ತಿಳಿಸಲಾಗುವುದು ಎಂದ ಅವರು ಅನೇಕ ಕಾರಣಗಳಿಂದ ಪಕ್ಷ ಬಿಟ್ಟು ಹೋದವರಿಗೆ ಮತ್ತೊಮ್ಮೆ ಪಕ್ಷ ಸೇರ್ಪಡೆಯಾಗಲು ಮುಕ್ತ ಅವಕಾಶವಿದ್ದು, ಪಕ್ಷದಿಂದ ದೂರ ಹೋದವರನ್ನು ಮತ್ತೊಮ್ಮೆ ಪಕ್ಷಕ್ಕೆ ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದರು.

ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಕಾರ್ಕಳ ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷ ಅನಿಲ್ ಪೂಜಾರಿ ನೆಲ್ಲಿಗುಡ್ಡೆ, ಕಿಸಾನ್ ಘಟಕದ ಅಧ್ಯಕ್ಷ ಉದಯ್ ಶೆಟ್ಟಿ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್, ಪುರಸಭೆ ಸದಸ್ಯ ಪ್ರವೀಣ್ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ಉಮೇಶ್ ರಾವ್ ಬಜಗೋಳಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article