
ಆರ್ಥಿಕ ಸಬಲೀಕರಣವೇ ಗ್ರಾಮಾಭಿವೃದ್ಧಿಯ ಧ್ಯೇಯ: ಅನಿಲ್ ಕುಮಾರ್
ಉಜಿರೆ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಅವರು ಕಾಳಜಿ ವಹಿಸಿ ಶಿಥಿಲಾವಸ್ಥೆಯಲ್ಲಿರುವ ನಿರ್ಗತಿಕರ ಮನೆಯನ್ನು ‘ವಾತ್ಸಲ್ಯ ಕಾರ್ಯಕ್ರಮ’ದಡಿ ನಿರ್ಮಿಸುವುದು ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಸಾಮಾಜಿಕ ಅಭಿವೃದ್ಧಿಯೊಂದಿಗೆ ಆರ್ಥಿಕ ಸಬಲೀಕರಣವೇ ಗ್ರಾಮಾಭಿವೃದ್ಧಿ ಧ್ಯೇಯ ಎಂದು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಹಾಗೂ ಹೇಮಾವತಿ ವೀ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಉಜಿರೆ ಗ್ರಾಮದ ಬಡೆಕೊಟ್ಟು ಎಂಬಲ್ಲಿ ಫೆ.25 ರಂದು ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯಡಿ ಆರ್ಥಿಕ ಸಬಲೀಕರಣಕ್ಕಾಗಿ ಬ್ಯಾಂಕ್‌ನಿಂದ ಸ್ವಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯವನ್ನು ಮನೆ ಬಾಗಿಲಿಗೆ ನೇರವಾಗಿ ತಲುಪಿಸುವ ಕಾರ್ಯವಾಗುತ್ತಿದೆ. ರಾಜ್ಯದಲ್ಲಿ 6.20 ಲಕ್ಷ ಮಂದಿ ಆರ್ಥಿಕ ಸೌಲಭ್ಯ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ದೇಶದ ಅತ್ಯಂತ ಮಾರ್ಗದರ್ಶಿ ಸಂಸ್ಥೆ ನಬಾರ್ಡ್ ಅಧ್ಯಯನ ನಡೆಸಿ ರೀಜಿನಲ್ ರೂರಲ್ ಬ್ಯಾಂಕ್ ಮೂಲಕ ಎಲ್ಲ ರಾಜ್ಯಗಳಿಗೆ ಈ ಮಾದರಿಯನ್ನು ಅಳವಡಿಸಬೇಕೆಂದು ತಿಳಿಸಿದೆ. ಶ್ರೀಲಂಕಾ ದೇಶವೂ ಈ ವ್ಯವಸ್ಥೆಯನ್ನು ವಿಸ್ತರಿಸಲು ಮುಂದಾಗಿದೆ ಎಂದರು.
ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಪ್ರಮುಖರು ಹಾಗೂ ಉದ್ಯಮಿ ಪ್ರಶಾಂತ್ ಜೈನ್ ಮಾತನಾಡಿ, ವಾತ್ಸಲ್ಯ ಎಂಬುದು ಹೇಮಾವತಿ ಅಮ್ಮನವರ ಕನಸಿನ ಕೂಸು. ಬಡವರ ಮೇಲಿನ ಕಾಳಜಿಯೊಂದಿಗೆ ಮನೆಯೊಂದಿಗೆ ಎಲ್ಲ ಆಹಾರ ಸಾಮಗ್ರಿ ತಂದುಕೊಡುವ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ಸಾಮಾಜಿಕ ಯೋಗ್ಯ ಕಾರ್ಯಕ್ರಮವಾಗಿದೆ. ಧರ್ಮಸ್ಥಳ ಮಾದರಿ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದ್ದು, ತಾಲೂಕಿನಲ್ಲಿ ನಡೆಯುತ್ತಿರುವುದು ನಮಗೆ ಹೆಮ್ಮೆ ಎಂದರು.
ಮನೆಯ ಯಜಮಾನಿ ಸುಶೀಲಾ ಅವರಿಗೆ ಫಲಪುಷ್ಪ ನೀಡಿ ಗೃಹಪ್ರವೇಶ ಕಾರ್ಯಕ್ರಮ ನಡೆಸಲಾಯಿತು. ಸುಶೀಲಾ ಅವರು ಉಜಿರೆ ಗ್ರಾಮದ ಬಡೆಕೊಟ್ಟು ಎಂಬಲ್ಲಿ ಶಿಥಿಲಾವಸ್ಥೆಯ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ಇವರಿಗೆ ಪಕೀರಾ ಎಂಬುವವರು ಮನೆ ನಿರ್ಮಾಣಕ್ಕೆ ಸ್ಥಳ ನೀಡಿದ್ದು, ಶೌರ್ಯ ತಂಡ ಮನೆ ನಿರ್ಮಾಣ ಕಾರ್ಯ ನಡೆಸಿಕೊಟ್ಟಿದೆ.
ಸಾಮಾಜಿಕ ಹಾಗೂ ಸಮುದಾಯ ಅಭಿವೃದ್ಧಿ:
ಗ್ರಾಮಾಭಿವೃದ್ಧಿ ಯೋಜನೆ ವರ್ಷದಿಂದ ವರ್ಷಕ್ಕೆ ಹೊಸ ಕಾರ್ಯಕ್ರಮ ಅಳವಡಿಸುತ್ತ ಬರುತ್ತಿದೆ. ಕಳೆದ ಹಲವಾರು ವರ್ಷಗಳದ 20 ಸಾವಿರ ಮಂದಿ ಮಾಸಾಶನ ನೀಡುತ್ತಾ ಬರಲಾಗುತ್ತಿದೆ. 50 ಸಾವಿರ ಮನೆಗಳಿಗೆ ಮನೆ ಪರಿಕರ ವಿತರಣೆ ಮಾಡಲಾಗಿದೆ. ವಾತ್ಸಲ್ಯ ಕಾರ್ಯಕ್ರಮದಡಿ ಪ್ರಸಕ್ತ 575ನೇ ಮನೆ ನಿರ್ಮಾಣವಾಗುತ್ತಿದ್ದು, ಇಂದು 376ನೇ ಮನೆ ಹಸ್ತಾಂತರವಾಗಿದೆ. ರಾಜ್ಯದಲ್ಲಿ ಒಟ್ಟು ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ 1000 ಮನೆಯನ್ನು ಗುರುತಿಸಲಾಗಿದೆ ಎಂದು ಎಸ್.ಕೆ.ಡಿ.ಆರ್.ಪಿ. ಸಿಇಒ ಅನಿಲ್ ಕುಮಾರ್ ತಿಳಿಸಿದರು.
ಜನಜಾಗೃತಿ ವೇದಿಕೆ ವಲಯಾಧ್ಯಕ್ಷೆ, ಉಜಿರೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಜ್ಞಾನವಿಕಾಸ ಕಾರ್ಯಕ್ರಮದ ನಿರ್ದೇಶಕ ವಿಠಲ್, ಒಕ್ಕೂಟದ ನಳಿನಿ, ವಿಜಯಾ, ಮನೆ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ಪಕೀರಾ, ಶೌರ್ಯ ವಿಭಾಗದ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.
ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ಕಾರ್ಯಕ್ರಮ ನಿರೂಪಿಸಿದರು.