
ಟ್ರಂಪ್ ಹೇಳಿಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರಜಾತಂತ್ರ ವ್ಯವಸ್ಥೆಯ ಘನತೆ ಗೌರವಕ್ಕೆ ದಕ್ಕೆ
ಕಾರ್ಕಳ: ಭಾರತದಲ್ಲಿ ಮತಪ್ರಮಾಣ ಹೆಚ್ಚಿಸಲು ಮೋದಿಯವರಿಗೆ 21 ದಶಲಕ್ಷ ಅಮೇರಿಕನ್ ಡೋಲರ್ ಅಂದರೆ ಸುಮಾರು 182 ಕೋಟಿ ರೂ. ದೇಣಿಗೆ ನೀಡಲಾಗಿದೆ ಎಂಬ ಅಮೇರಿಕಾ ಅಧ್ಯಕ್ಷ ಟ್ರಂಪ್ ಹೇಳಿಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಈ ದೇಶದ ಪ್ರಜಾತಂತ್ರ ವ್ಯವಸ್ಥೆಯ ಘನತೆ ಗೌರವಕ್ಕೆ ದಕ್ಕೆ ತಂದಿದೆ. ಆದಾಗಿಯೂ ಪ್ರಧಾನಿ ಮೋದಿ ಹಾಗೂ ಅವರ ಪಕ್ಷ ಈ ಬಗ್ಗೆ ಮೌನ ವಹಿಸಿರುವುದರ ಹಿಂದೆ ದೇಣಿಗೆ ದುರುಪಯೋಗದ ಸಂಶಯವಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಕಟಣೆಯಲ್ಲಿ ಹೇಳಿದೆ.
ಈ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿದು ಯುಎಸ್‌ಏಡ್ ಭಾಗವಾಗಿ ಬಂದಿರುವ 182 ಕೋಟಿ ದೇಣಿಗೆಯ ಪೂರ್ಣ ವಿವರವನ್ನು ಮುಖ್ಯವಾಗಿ ಬಂದಿರುವುದು ನಿಜವಾದಲ್ಲಿ ಯಾವುದಕ್ಕೆ ವಿನಿಯೋಗಿಸಲಾಯಿತೆಂಬ ಬಗ್ಗೆ ವಿವರ ನೀಡಲಿ. ಬಂದಿರುವುದು ನಿಜವಲ್ಲದಿದ್ದಲ್ಲಿ ಟ್ರಂಪ್ ಒಬ್ಬ ಸುಳ್ಳುಗಾರನೆಂದು ಜಾಗತೀಕ ಮಟ್ಟದಲ್ಲಿ ಘೋಷಿಸಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಒಂದು ದೇಶದ ಪ್ರಜಾತಂತ್ರ ವ್ಯವಸ್ಥೆಯ ಅಡಿಯಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ಮತ್ತೊಂದು ದೇಶದ ದೇಣಿಗೆ ಆ ದೇಶದ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದಂತೆ. ಇದನ್ನು ವಿದೇಶಿ ಹಸ್ತಕ್ಷೇಪದ ಪಿತೂರಿ ಎಂದು ವಿಶ್ಲೇಶಿಸ ಬಹುದಾಗಿದೆ. ಇದು ಪ್ರಜಾತಂತ್ರಕ್ಕೆ ಅಪಾಯಕಾರಿ. ಇದು ವಿಶ್ವ ಸಂಸ್ಥೆ ಪ್ರತಿಪಾದಿಸುವ ಪ್ರಜಾತಂತ್ರ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಕಳೆದ ಅವಧಿಯ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೇರಿಕಾದ ನೆಲದಲ್ಲಿ ನಿಂತು ಬೈಡನ್ ವಿರುದ್ಧ ಟ್ರಂಪ್ ಪರ ಪ್ರಚಾರ ಮಾಡಿದ ನಮ್ಮ ಪ್ರಧಾನಿಯವರ ಅಸಮತೋಲಿತ ಅಂತರ್ರಾಷ್ಟ್ರೀಯ ರಾಜನೀತಿಯ ತಪ್ಪಿನ ಪರಮಾರ್ಜನೆಯನ್ನು ಬಹುಶಃ ನಾವಿಂದು ಮಾಡಬೇಕಾಗಿ ಬಂದಿದೆ. ಅಂದಿನ ಅಧ್ಯಕ್ಷ ಬೈಡನ್ ಅವಧಿಯಲ್ಲಿ ನೀಡಲಾಗಿದೆ ಎನ್ನಲಾದ ದೇಣಿಗೆಯನ್ನೇ ಇಂದು ಇಂದಿನ ಅಧ್ಯಕ್ಷ ಟ್ರಂಪ್ ತನ್ನ ಆಪ್ತ ಮಿತ್ರ ಪ್ರಧಾನಿ ಮೋದೀಜಿಯ ವಿರುದ್ಧ ಬಳಸಿ ಬಯಲು ಮಾಡಿರುವುದು ವಿಪರ್ಯಾಸವೇ ಸರಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.