ಕಡು ಬೇಸಿಗೆಯಲ್ಲೂ ಉಪ್ಪು ನೀರು ನುಗ್ಗಿ ಹೊಳೆಯಂತಾಗಿರುವ ಫಲವತ್ತಾದ ಕೃಷಿ ಗದ್ದೆಗಳು: ಬೆಳೆ ನಾಶ

ಕಡು ಬೇಸಿಗೆಯಲ್ಲೂ ಉಪ್ಪು ನೀರು ನುಗ್ಗಿ ಹೊಳೆಯಂತಾಗಿರುವ ಫಲವತ್ತಾದ ಕೃಷಿ ಗದ್ದೆಗಳು: ಬೆಳೆ ನಾಶ


ಕುಂದಾಪುರ: ನಗರದ ಹೊರವಲಯದಲ್ಲಿನ ವಡೇರಹೋಬಳಿ ಗ್ರಾಮದ ತಾತ್ಯಾಟೋಪೆ ರಸ್ತೆಯ ಶ್ರೀ ಅರಮಚನ್ನಕೇಶ್ವರ ದೇವಸ್ಥಾನದ ಹಿಂಬದಿಯಲ್ಲಿ ಇರುವ ಫಲವತ್ತಾದ ಕೃಷಿ ಭೂಮಿಗೆ ಉಪ್ಪು ನೀರು ಒಂದು ಶಾಪವಾಗಿ ಪರಿಣಮಿಸಿದೆ.

ಪ್ರತಿ ವರ್ಷ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಸಮುದ್ರದ ಉಪ್ಪು ನೀರು ಕೃಷಿಗದ್ದೆಗಳಿಗೆ ನುಗ್ಗಿ ಕೃಷಿಕರಿಗೆ ಕೃಷಿ ಮಾಡಲು ತೀವ್ರ ತೊಂದರೆಯಾಗುತ್ತಿದೆ.   ಕೃಷಿ ಭೂಮಿಯ ಅಂಚಿನಲ್ಲಿರುವ ಗಂಗಾವಳಿ ನದಿ ಹಿನ್ನೀರು ಅಳಿವೆ ಬಾಗಿಲು ಮಾರ್ಗದಿಂದ ಸಮುದ್ರದ ಉಪ್ಪು ನೀರು ಈ ಭಾಗಕ್ಕೆ ಪ್ರವಹಿಸುತ್ತದೆ. 


ಸಮುದ್ರದ ಭರತದ ವೇಳೆ ನದಿಯಲ್ಲಿ ಸಮುದ್ರದ ನೀರು ಉಕ್ಕಿ ಹರಿಯುತ್ತದೆ. ಇದರಿಂದಾಗಿ ಈ ಪ್ರದೇಶದ ಸುಮಾರು 80 ರಿಂದ 100 ಎಕರೆಯಷ್ಟು ಭೂಮಿಯಲ್ಲಿನ ಕೃಷಿ ನಾಶವಾಗುತ್ತಿದೆ. ಇಲ್ಲಿ ಬತ್ತದ ಪೈರು ಕೊಯ್ಲಿನ ನಂತರ ಉದ್ದು, ಹೆಸರು, ನೆಲಗಡಲೆ ಬೆಳೆಯುತ್ತಾರೆ. ಈ ಮಾರ್ಚ್ ವೇಳೆಗೆ ಈ ಬೆಳೆಗಳ ಫಸಲು ಕೈಗೆ ಸಿಗುತ್ತದೆ ಎನ್ನುವಾಗ ಉಪ್ಪು ನೀರಿನ ಹಾವಳಿಯಿಂದ ಕೈಗೆ ಬಂದದ್ದು ಬಾಯಿಗಿಲ್ಲದಂತಾಗಿದೆ. ಈ ಕೃಷಿಯ ಬಗ್ಗೆ ರೈತರು ಮಾಡಿದ್ದ ಸಾಲ ತೀರಿಸುವ ಮಾರ್ಗ ಕಾಣದೆ ರೈತರು ಚಿಂತಿತರಾಗಿದ್ದಾರೆ.

ಈ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ಪುರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ.  ಈ ರೀತಿ ಸಮಸ್ಯೆಯಿಂದ ಕೃಷಿಕರು ಕಂಗಾಲಾಗಿದ್ದಾರೆ. ಉಪ್ಪು ನೀರು ತಡೆಗೋಡೆ ರಚಿಸಿದರೆ ಈ ಸಮಸ್ಯೆ ನಿವಾರಿಸಬಹುದು. ಮಾತ್ರವಲ್ಲ, ಈ ಭಾಗದಲ್ಲಿ ರಿಂಗ್ ರೋಡ್ ಮುಂದುವರಿಸಿದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂಬುದು ಈ ಭಾಗದ ಕೃಷಿಕರ ಅಭಿಪ್ರಾಯ. ಈ ಸಮಸ್ಯೆಗೆ ಪರಿಹಾರ ಒದಗಿಸದೆ ಇದ್ದರೆ ಕೃಷಿ ಗದ್ದೆಗಳು ಉಪ್ಪು ನೀರಿನ ಹೊಳೆ  ಆಗುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಾಗಿ ಈ ಭಾಗದ ನೊಂದ ಕೃಷಿಕರು ಮನವಿ ಮಾಡಿದ್ದಾರೆ. ಕೂಡಲೇ ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article