
ಮಾ.20-23 ರಂದು ಬೈಬಲ್ ಮಹಾ ಸಮ್ಮೇಳನ
ಮಂಗಳೂರು: ಮಂಗಳೂರು ಕೆಥೋಲಿಕ್ ಧರ್ಮಕ್ಷೇತ್ರದ ಬೈಬಲ್ ಆಯೋಗ ಮತ್ತು ಕೆಥೋಲಿಕ್ ಕಾರಿಸ್ಮಾತಿಕ್ ಸೇವಾ ಸಂಚಲನ ವತಿಯಿಂದ ಕ್ರಿಸ್ತ ಜಯಂತಿ-2025ರ ಜ್ಯುಬಿಲಿ ವರ್ಷ ಮಹೋತ್ಸವ ಹಿನ್ನೆಲೆಯಲ್ಲಿ ಬೈಬಲ್ ಮಹಾ ಸಮ್ಮೇಳನವನ್ನು ಮಾ. 20ರಿಂದ 23ರವರೆಗೆ ಸಂಜೆ 4ರಿಂದ ರಾತ್ರಿ 8.30ರವರೆಗೆ ನಗರದ ಕುಲಶೇಖರ ಕೋರ್ಡೆಲ್ ಪವಿತ್ರ ಶಿಲುಬೆಯ ಚರ್ಚ್‌ನಲ್ಲಿ ಆಯೋಜಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ‘ವಿಶ್ವಾಸದ ಯಾತ್ರಿಕರು’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಬಲಿಪೂಜೆ, ಪರಮ ಪ್ರಸಾದದ ಆರಾಧನೆ, ಪ್ರವಚನ ಹಾಗೂ ವಿಶೇಷ ಪ್ರಾರ್ಥನಾ ವಿಧಿ ಇರಲಿದೆ ಎಂದು ತಿಳಿಸಿದರು.
ಕುಟುಂಬ ಕಲ್ಯಾಣ, ಜಾಗತಿಕ ಶಾಂತಿ ಹಾಗೂ ಜನರ ಒಳಿತಿಗಾಗಿ, ದೇವರ ಕೃಪಾ, ವರದಾನ, ಆಶೀರ್ವಾದಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಅನಕ್ಕರ ಮೇರಿಯನ್ ರಿಟ್ರಿಟ್ ಸೆಂಟರಿನ ನಿರ್ದೇಶಕ, ಧರ್ಮಗುರು ವಂ. ಡೊಮಿನಿಕ್ ವಲಮನಲ್ ಅವರು ವಿಶೇಷ ಪ್ರಭೋದನೆ ನೀಡಲಿದ್ದಾರೆ ಎಂದರು.
ಬೈಬಲ್ ಮಹಾ ಸಮ್ಮೇಳನದಲ್ಲಿ ಮಂಗಳೂರು ಹಾಗೂ ಸುತ್ತಮುತ್ತಲಿನ ಸುಮಾರು 15 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಕ್ರಿಸ್ತ ಜಯಂತಿ-2025ರ ಜ್ಯುಬಿಲಿ ವರುಷದ ಪೂರ್ವ ಸಿದ್ಧತೆಯಾಗಿ ನಡೆಸಿದ ಮಹಾ ಬೈಬಲ್ ಸಮ್ಮೇಳನವು ಅಭೂತಪೂರ್ವ ಯಶಸ್ಸು ಕಂಡಿತ್ತು ಎಂದು ಬಿಷಪ್ ಹೇಳಿದರು.
ಮಂಗಳೂರು ಧರ್ಮಕ್ಷೇತ್ರದ ವಿಕಾರ್ ಜೆರಾಲ್ ವಂ. ಮ್ಯಾಕ್ಸಿಂ ಎಲ್. ನೊರೊನ್ಹಾ, ರಾಕ್ಣೊ ವ್ಯವಸ್ಥಾಪಕ ವಂ. ರೂಪೇಶ್ ಮಾಡ್ತಾ, ಕುಲಶೇಖರ ಚರ್ಚ್‌ನ ಪ್ರಧಾನ ಧರ್ಮಗುರು ವಂ. ಕ್ಲಿಫರ್ಡ್ ಫರ್ನಾಂಡಿಸ್, ಧರ್ಮಕ್ಷೇತ್ರದ ಪಿಆರ್‌ಒ ರೋಯ್ ಕ್ಯಾಸ್ತಲಿನೊ, ಸಮ್ಮೇಳನದ ಅಧ್ಯಕ್ಷ ಕೇವನ್ ಡಿಸೋಜ ಇದ್ದರು.