
ಮಾ.16 ರಂದು ‘ಪ್ರಾಂತೀಯ ಹಿಂದು ರಾಷ್ಟ್ರ ಅಧಿವೇಶನ’
ಮಂಗಳೂರು: ಹಿಂದುಗಳ ಮೇಲೆ ಆಗುತ್ತಿರುವ ಹಲ್ಲೆಗಳು ನಡೆಯುತ್ತಿದ್ದು, ಭಾರತದ ಅಖಂಡತೆಯನ್ನು ಕಾಪಾಡಲು ಹಿಂದು ರಾಷ್ಟ್ರದ ಅಗತ್ಯವಿದ್ದು, ಮಾ.16 ರಂದು ಬೆಳಗ್ಗೆ 10 ಗಂಟೆಗೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಇಕೋ ಸಿಸ್ಟಮ್ ನಿರ್ಮಾಣಕ್ಕೆ ‘ಪ್ರಾಂತೀಯ ಹಿಂದು ರಾಷ್ಟ್ರ ಅಧಿವೇಶನ’ ನಡೆಸಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ತಿಳಿಸಿದರು.
ಅವರು ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಅಧಿವೇಶನದಲ್ಲಿ ದಕ್ಷಿಣ ಕನ್ನಡ, ಕೊಡಗು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ 100ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ 2500ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ ಎಂದರು.
ಅಧಿವೇಶನದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸುಲಿಬೆಲೆ, ಹಿರಿಯ ವಕೀಲ ಅರುಣ ಶ್ಯಾಮ್, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸಂತರಾದ ರಮಾನಂದ ಗೌಡ ಸೇರಿದಂತೆ ನೂರಾರು ವಕೀಲರು, ವೈದ್ಯರು, ಉದ್ಯಮಿಗಳು, ಚಿಂತಕರು, ಲೇಖಕರು, ದೇವಸ್ಥಾನಗಳ ವಿಶ್ವಸ್ಥರು ಮತ್ತು ನೂರಾರು ಹಿಂದೂ ಸಕ್ರೀಯ ಕಾರ್ಯಕರ್ತರು, ವಿವಿಧ ಆಧ್ಯಾತ್ಮಿಕ, ಧಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿರುವವರು ಎಂದು ತಿಳಿಸಿದರು.
ಈ ಅಧಿವೇಶನದಲ್ಲಿ ಭಾಗವಹಿಸಲು ಇಚ್ಛಿಸುವವರು ಮೊ.ನಂ. 7204082652ಗೆ ಸಂಪರ್ಕಿಸಬಹುದು ಎಂದರು.
ವಕ್ಫ್ ಬೋರ್ಡ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ರಾಜ್ಯದ ಸಾವಿರಾರು ರೈತರ, ದೇವಸ್ಥಾನಗಳ ಜಮೀನುಗಳನ್ನು ಕಬಳಿಸಲು ಪ್ರಯತ್ನಿಸುತ್ತಿದೆ. ಇತ್ತಿಚೆಗೆ ಕರ್ನಾಟಕ ಸರಕಾರವು ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ 4500 ಕೋಟಿ ರೂ.ಗಳನ್ನು ನೀಡಿದೆ. ಈ ವರ್ಷದ ಶಿವರಾತ್ರಿ, ಗಣೇಶ ಚತುರ್ಥಿಯ ವಿಸರ್ಜನೆಯ ಸಂದರ್ಭದಲ್ಲಿ ಮತ್ತು ದೀಪಾವಳಿ ಹಬ್ಬದಲ್ಲಿ ಹಿಂದೂಗಳ ಮೇಲೆ ಕಲ್ಲು ತೂರಾಟ, ಮಾರಣಾಂತಿಕ ಹಲ್ಲೆ ಮಾಡಲಾಯಿತು. ಲವ್ ಜಿಹಾದ್, ಹಲಾಲ್ ಜಿಹಾದ್ ಮೀತಿಮೀರಿ ನಡೆಯುತ್ತಿದೆ, ರಾಜ್ಯದ ಪಠ್ಯ ಇತಿಹಾಸದಲ್ಲಿ ಹಿಂದುಗಳ ಇತಿಹಾಸವನ್ನು ತಿರುಚಲಾಗುತ್ತಿದೆ. ಮಣಿಪುರ, ಮಿಜೋರಾಮ್‌ಗಳನ್ನು ಪ್ರತ್ಯೇಕ ಕ್ರೈಸ್ತ ದೇಶವಾಗಿ ಸ್ಥಾಪಿಸುವ ಕುತಂತ್ರ ಹಾಗೂ ವಿಭಜನೆಯ ಸಂಕೇತ ಇದಾಗಿದೆ ಎಂದು ಹೇಳಿದರು.
ಉದ್ಯಮಿಗಳಾದ ಎಂ.ಜೆ. ಶೆಟ್ಟಿ, ನ್ಯಾಯವಾದಿ ಈಶ್ವರ ಕೊಟ್ಟಾರಿ, ಹಿಂದೂ ಯುವ ಸೇನೆಯ ಅಧ್ಯಕ್ಷ ಕಿರಣ ರೈ, ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಚಂದ್ರ ಮೊಗವೀರ್, ಹಿಂದೂ ಜನ ಜಾಗೃತಿ ಸಮಿತಿಯ ವಕ್ತಾರ ಮೋಹನ್ ಗೌಡ ಉಪಸ್ಥಿತರಿದ್ದರು.