
ಅಂತಾರಾಷ್ಟ್ರೀಯ ಹಾಸ್ಟೆಲ್ ಕಟ್ಟಡ ಬಳಕೆಗೆ ಆಲೋಚನೆ: ಪ್ರೊ. ಧರ್ಮ
ಮಂಗಳೂರು: ವಿಶ್ವವಿದ್ಯಾನಿಲಯ ಕ್ಯಾಂಪಸ್ ಒಳಗಿರುವ ಇನ್ನೂ ಬಳಕೆಯಾದ ಅಂತಾರಾಷ್ಟ್ರೀಯ ಹಾಸ್ಟೆಲ್ ಕಟ್ಟಡವನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಉಪಯೋಗಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಧರ್ಮ ತಿಳಿಸಿದ್ದಾರೆ.
ಮಂಗಳೂರು ವಿವಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಗರದಲ್ಲಿ ಸಾಕಷ್ಟು ಖಾಸಗಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಿವೆ. ಅವರಿಗೆ ಈ ಕಟ್ಟಡ ಬಳಕೆಗೆ ಸಾಧ್ಯವಾಗುವ ನಿಟ್ಟಿನಲ್ಲಿ ಬೇರೆ ಯಾವುದಾದರೂ ವಿವಿಯಿಂದ ಇಂತಹ ಕ್ರಮ ಆಗಿದ್ದರೆ ಅದನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಸರಕಾರದ ಅನುಮತಿ ಪಡೆದು ಕ್ರಮ ವಹಿಸಲು ಚಿಂತಿಸಲಾಗಿದೆ ಎಂದು ಅವರು ಹೇಳಿದರು.
ಸದ್ಯ ನಮ್ಮ ವಿವಿ ಕ್ಯಾಂಪಸ್‌ನ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ಬಾರಿ 13 ಪೇಟೆಂಟ್‌ಗಳು ಮಂಗಳೂರು ವಿವಿಗೆ ದೊರಕಿವೆ. ನಮ್ಮ ವಿಜ್ಞಾನ ಪ್ರಯೋಗಾಲಯವನ್ನು ನಾವು ನಿರ್ವಹಣೆ ಮಾಡಬೇಕಾಗಿದೆ. ಸಂಶೋಧನಾ ವ್ಯವಸ್ಥೆ ಮಾಡಬೇಕಾಗಿದೆ. ಸಣ್ಣ ಮೊತ್ತವನ್ನಾದರೂ ಸಂಶೋಧನೆಗೆ ಬಳಕೆ ಮಾಡದಿದ್ದರೆ ರಾಷ್ಟ್ರ ಮಟ್ಟದಲ್ಲಿ ನಾವು ಸಮಸ್ಯೆ ಎದುರಿಸಬೇಕಾಗಿದೆ. ಅದಕ್ಕಾಗಿ ನಿರಂತರ ತರಗತಿ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದವರು ಹೇಳಿದರು.
ಗುತ್ತಿಗೆದಾರರಿಗೆ ಪಾವತಿ ಬಾಕಿ: ಹಣದ ಕೊರತೆ
ಅಂತಾರಾಷ್ಟ್ರೀಯ ಹಾಸ್ಟೆಲ್ ಕಟ್ಟಡದ ಕಾಮಗಾರಿಯ ಗುತ್ತಿಗೆ ಪಾವತಿ ಸೇರಿದಂತೆ ಮಂಗಳೂರು ವಿವಿ ಕ್ಯಾಂಪಸ್‌ನ ವಿವಿಧ ಕಾಮಗಾರಿಗಳ ಸುಮಾರು 35ರಿಂದ 40ರಷ್ಟು ಗುತ್ತಿಗೆದಾರರಿಗೆ ಅಂದಾಜು 40 ಕೋಟಿರೂ. ಪಾವತಿಗೆ ಬಾಕಿ ಇದೆ. ಇದರಲ್ಲಿ ಅಂತಾರಾಷ್ಟ್ರೀಯ ಹಾಸ್ಟೆಲ್ ಕಟ್ಟಡದ ಬಾಕಿಏ ಸುಮಾರು 20 ಕೋಟಿ ರೂ.ಗಳು. ಮಂಗಳೂರು ವಿವಿ ಹಣಕಾಸಿನ ತೊಂದರೆಯನ್ನು ಎದುರಿಸುತ್ತಿದೆ. ವಿವಿಯ ಶೇ. 72ರಷ್ಟು ತಾತ್ಕಾಲಿಕ ಉದ್ಯೋಗಿಗಳಿಗೆ ವೇತನ ನೀಡಬೇಕು. ಕೆಲ ಸಮಯದ ಹಿಂದೆ ಐದಾರು ತಿಂಗಳು ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಆದರೆ ಇದೀಗ ಪ್ರತಿ ತಿಂಗಳು ವೇತನ ಪಾವತಿ ಹಂತಕ್ಕೆ ಬಂದಿzವೆ. ಗುತ್ತಿಗೆದಾರರೂ ನಿಜವಾಗಿಯೂ ಅವರ ಕೆಲಸ ಮಾಡಿದ್ದಾರೆ, ಅವರಿಗೆ ಬಾಕಿ ಇದೆ. ಅವರಿಗೂ ಇಲ್ಲಿನ ಸಂಕಷ್ಟದ ಅರಿವಿದೆ. ಸರಕಾರದಿಂದ ನಾವು 24 ಕೋಟಿ ರೂ. ಅನುದಾನ ಕೇಳಿದ್ದೆವು. ಅದು ಸಿಕ್ಕಿದ್ದರೆ ಒಂದಷ್ಟು ಗುತ್ತಿಗೆದಾರರ ಪಾವತಿಯನ್ನೂ ಮಾಡಬಹುದಿತ್ತು. ಆದರೆ ಸರಕಾರದಿಂದ 11.30 ಕೋಟಿ ರೂ. ಅನುದಾನ ಬಂದಿರುವುದು. ಅದನ್ನು ಪರಿವರ್ತನೆ ಮಾಡುವಂತಿಲ್ಲ. ಮುಂದೆ ಸರಕಾರದಿಂದ ಅನುದಾನದ ಭರವಸೆ ಇದೆ ಎಂದು ಪ್ರೊ. ಧರ್ಮ ಹೇಳಿದರು.
ಗ್ರಾ.ಪಂ. ತೆರಿಗೆ ಹಂತ ಹಂತವಾಗಿ ಪಾವತಿ:
ಸ್ಥಳೀಯ ಗ್ರಾಮ ಪಂಚಾಯತ್ ಮಂಗಳೂರು ವಿವಿ ಕ್ಯಾಂಪಸ್‌ನ ವಿಶ್ವ ಮಂಗಳ ಟ್ರಸ್ಟ್‌ಗೂ ತೆರಿಗೆ ವಿಧಿಸಿದೆ. ಅದು ವಿವಿ ಕ್ಯಾಂಪಸ್‌ನಲ್ಲಿ ಇದೆಯಾದರೂ ಅದರ ವ್ಯವಹಾರ ವಿವಿ ವ್ಯಾಪ್ತಿಗೊಳಪಟ್ಟಿಲ್ಲ. ಅದು ಟ್ರಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಅಂತಾರಾಷ್ಟ್ರೀಯ ಹಾಸ್ಟೆಲ್ ಕಟ್ಟಡವನ್ನು ವಾಣಿಜ್ಯ ಕಟ್ಟಡವಾಗಿ ಪರಿಗಣಿಸಲಾಗಿದೆ. ಆದರೆ ಆ ಕಟ್ಟಡ ಬಳಕೆಯಾಗದ ಸೊತ್ತಾಗಿದ್ದು, ಅದನ್ನು ಕಮರ್ಶಿಯಲ್ ಆಗಿ ಪರಿಗಣಿಸಿರಿರುವುದರಿಂದ ಅಧಿಕ ತೆರಿಗೆ ವಿಧಿಸಲಾಗಿದೆ. ಈ ಬಗ್ಗೆ ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಬಳಕೆ ಆಗದ ಇವೆರಡೂ ಕಟ್ಟಡಗಳನ್ನು ಹೊರತುಪಡಿಸಿ ತೆರಿಗೆ ವಿಧಿಸುವಂತೆ ಕೋರಲಾಗಿದೆ. ಆ ಬಗ್ಗೆ ಕ್ರಮ ಕೈಗೊಂಡ ತಕ್ಷಣವೇ ಹಂತ ಹಂತವಾಗಿ ತೆರಿಗೆ ಪಾವತಿಸುವ ಒಡಂಬಡಿಕೆ ಮಾಡಲಾಗಿದೆ ಎಂದವರು ಹೇಳಿದರು.