ಕಡಬ ವಸತಿ ನಿಲಯದ ಅವ್ಯವಸ್ಥೆ ಕಂಡು ಅಧಿಕಾರಿಗಳೇ ಶಾಕ್..

ಕಡಬ ವಸತಿ ನಿಲಯದ ಅವ್ಯವಸ್ಥೆ ಕಂಡು ಅಧಿಕಾರಿಗಳೇ ಶಾಕ್..


ಮಂಗಳೂರು: ಕಡಬದ ಸರಕಾರಿ ಕಾಲೇಜು ಪಕ್ಕದಲ್ಲಿರುವ ಬಾಲಕರ ವಸತಿ ನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ವಸತಿ ನಿಲಯದ ಪರಿಸ್ಥಿತಿ ನೋಡಿ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. 

ಕಡಬದ ಸರ್ಕಾರಿ ಕಾಲೇಜು ಪಕ್ಕದಲ್ಲಿರುವ ಬಾಲಕರ ವಸತಿ ನಿಲಯದಲ್ಲಿ ನೀಡಲಾಗುತ್ತಿರುವ ಕಳಪೆ ಆಹಾರದ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದವು. ಈ ಬಗ್ಗೆ ಮಾಹಿತಿ ಪಡೆದ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ತಕ್ಷಣವೇ ತಪಾಸಣೆ ನಡೆಸಿದ್ದು, ಅವ್ಯವಸ್ಥೆಯನ್ನು ಪತ್ತೆ ಮಾಡಿದ್ದಾರೆ. ಮಂಗಳೂರು ಲೋಕಾಯುಕ್ತ ಎಸ್ಪಿ ಕುಮಾರ್‌ಚಂದ್ರ ಮತ್ತು ಡಿವೈಎಸ್ಪಿ ಗಾನಾ ಪಿ.ಕುಮಾರ್ ಮತ್ತು ಇನ್ಸ್‌ಪೆಕ್ಟರ್ ಚಂದ್ರಶೇಖರ್ ನೇತೃತ್ವದಲ್ಲಿ ಲೋಕಾಯುಕ್ತ ಸಿಬ್ಬಂದಿ ಬಾಲಕರ ವಸತಿ ನಿಲಯದಲ್ಲಿ ತಪಾಸಣೆ ನಡೆಸಿದರು. 

ಈ ವೇಳೆ ಕಳಪೆ ಆಹಾರ ಪೂರೈಕೆ, ಸಿಸಿ ಕ್ಯಾಮರಾ ಸರಿಯಿಲ್ಲದ ವಿಚಾರ, ಮ್ಯಾಟ್ ಮಾರಾಟ ಆರೋಪ, ಸುರಕ್ಷತಾ ಸಿಬ್ಬಂದಿ, ವಾರ್ಡನ್ಗಳೇ ಇಲ್ಲದಿರುವುದು ಸೇರಿದಂತೆ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ. ವಾರ್ಡನ್ ಸೇರಿದಂತೆ ಸಿಬ್ಬಂದಿ ಹಾಸ್ಟೇಲ್ಗೆ ಸರಿಯಾಗಿ ಬಾರದಿರುವುದು ಮತ್ತು ಮಕ್ಕಳಿಗಾಗಿ ಬಂದಿರುವ ರಬ್ಬರ್ ಸ್ಪೋರ್ಟ್ಸ್ ಮ್ಯಾಟ್‌ಗಳಲ್ಲಿ ಸುಮಾರು 110 ಮ್ಯಾಟ್‌ಗಳ ಮಾರಾಟ ಮತ್ತು ಆಹಾರದ ಗುಣಮಟ್ಟದ ಕುರಿತು ಅಧಿಕಾರಿಗಳಿಗೆ ಇಲ್ಲಿನ ಮಕ್ಕಳು ವಿವರಿಸಿದರು. ಕೂಡಲೇ ಅಡುಗೆ ಸಾಮಗ್ರಿ ಸಂಗ್ರಹಿಸಿಟ್ಟಿದ್ದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಆಹಾರ ಪದಾರ್ಥಗಳಲ್ಲಿ ಹುಳಗಳು ಸಂಚರಿಸುವುದನ್ನು ಕಣ್ಣಾರೆ ಕಂಡಿದ್ದಾರೆ. 

ರೂಮ್‌ಗಳಲ್ಲಿ ಬೆಳಕಿನ ಕೊರತೆ, ಕೆಲವು ಮಕ್ಕಳು ತಾವೇ ಅಕ್ವೇರಿಯಂ ಸೇರಿದಂತೆ ಇತರ ವಸ್ತುಗಳನ್ನು ತಂದಿರುವ ಬಗ್ಗೆ, ಹಾಜರಾತಿ ಪುಸ್ತಕದಲ್ಲಿ ಮಕ್ಕಳು ಮತ್ತು ಅಧಿಕಾರಿಗಳ ಸಹಿ ಇಲ್ಲದಿರುವ ಬಗ್ಗೆ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲೋಕಾಯುಕ್ತ ಎಸ್ಪಿ ಕುಮಾರಚಂದ್ರ, ಕೂಡಲೇ ವರದಿ ಮಾಡಿ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. “ನಮಗೆ ಸರ್ಕಾರದಿಂದ ಹಣಕಾಸು ಬಿಡುಗಡೆ ಆಗುತ್ತಿಲ್ಲ. ಇಲ್ಲಿ 28 ಮಕ್ಕಳಿದ್ದಾರೆ. ಆದರೆ ಇರುವುದು ಇಬ್ಬರು ತಾತ್ಕಾಲಿಕ ಸಿಬ್ಬಂದಿ ಮಾತ್ರ. ಮಕ್ಕಳಿಗೆ ಆಹಾರ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ನಾವು ಈ ವಿಚಾರವನ್ನು ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಆಹಾರ ಧಾನ್ಯಗಳಿಗಾಗಿ ಹಣಕಾಸು ಬಿಡುಗಡೆಯಾಗುತ್ತಿಲ್ಲ” ಎಂದು ಕಡಬ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಿನಯಕುಮಾರಿ ತಿಳಿಸಿದರು. 

ಲೋಕಾಯುಕ್ತ ಸಿಬ್ಬಂದಿ ಸುರೇಂದ್ರ, ಮಹೇಶ್, ವಿನಾಯಕ, ಶರತ್ ಸಿಂಗ್, ರುದ್ರೇಶ್, ವೀವೇಕ್ ತಪಾಸಣೆಯಲ್ಲಿ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article