
ಸ್ಪೆಷಲ್ ಒಲಿಂಪಿಕ್ ಕೋಚ್ ಆಗಿ ಸೌಮ್ಯ ದೇವಾಡಿಗ ಆಯ್ಕೆ
ಮಂಗಳೂರು: ಇಟಲಿಯ ಟ್ಯೂರಿನ್‌ನಲ್ಲಿ ಮಾ.8ರಿಂದ 15ರ ವರೆಗೆ ನಡೆದ ಸ್ಪೆಷಲ್ ಒಲಿಂಪಿಕ್ಸ್ ವಿಂಟರ್ ಗೇಮ್‌ನ ಫ್ಲೋರ್‌ಬಾಲ್ ಭಾರತ ತಂಡದ ಕೋಚ್ ಆಗಿ ಸುರತ್ಕಲ್ ಲಯನ್ಸ್ ವಿಶೇಷ ಶಾಲೆಯ ಶಿಕ್ಷಕಿ ಸೌಮ್ಯ ದೇವಾಡಿಗ ಅವರು ಆಯ್ಕೆಯಾಗುವ ಜತೆಗೆ ತಂಡಕ್ಕೆ ಕಂಚಿನ ಪದಕ ದೊರೆಕಿಸಿ ಕೊಡುವಲ್ಲಿ ಯಶಸ್ಸು ಕಂಡಿದ್ದಾರೆ ಎಂದು ಲಯನ್ಸ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೇಶವ ಸಾಲಿಯಾನ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಶೇಷ ಒಲಿಂಪಿಕ್ಸ್‌ನಲ್ಲಿ 102 ದೇಶಗಳು ಭಾಗವಹಿಸಿತ್ತು. ಇದರಲ್ಲಿ 1500 ಕ್ರೀಡಾಪಟುಗಳು, ಒಂದು ಸಾವಿರಕ್ಕೂ ಅಧಿಕ ತರಬೇತುದಾರರು ಪಾಲ್ಗೊಂಡಿದ್ದರು. ಭಾರತ ಫ್ಲೋರ್ ತಂಡದಲ್ಲಿ ಮಂಗಳೂರಿನ ಸೌಮ್ಯ ದೇವಾಡಿಗ ಕೋಚ್ ಆಗಿ ತಂಡಕ್ಕೆ ಪದಕ ಗೆಲ್ಲುವ ಮೂಲಕ ಶಾಲೆ, ಊರಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ ಎಂದರು.
ಕೋಚ್ ಸೌಮ್ಯದೇವಾಡಿಗ ಮಾತನಾಡಿ, ವಿಶೇಷ ಒಲಿಂಪಿಕ್ಸ್‌ನ ಫ್ಲೋರ್ ಬಾಲ್ ವಿಭಾಗದಲ್ಲಿ ಬಾಂಗ್ಲಾ ದೇಶಕ್ಕೆ ಚಿನ್ನ, ಉಕ್ರೇನ್‌ಗೆ ಬೆಳ್ಳಿ ಬಂತು. ಭಾರತ ಕಂಚಿನ ಪದಕದಲ್ಲಿ ತೃಪ್ತಿ ಪಡೆಯಿತು. ಈ ವಿಭಾಗದಲ್ಲಿ 33 ದೇಶಗಳು ಕಾಣಿಸಿಕೊಂಡಿತ್ತು. ಭಾರತ ತಂಡ 10ರಲ್ಲಿ ಏಳರಲ್ಲಿ ಜಯಗಳಿಸಿತ್ತು ಎಂದರು.
ಈ ಸಂದರ್ಭ ಲಯನ್ಸ್ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಮೊಹಿದ್ದೀನ್ ಕುಂಞಿ, ಖಜಾಂಚಿ ಜಯಂತ್ ಶೆಟ್ಟಿ, ಕಾರ‍್ಯದರ್ಶಿ ಜೀವನ್ ಬೆಳ್ಳಿಯಪ್ಪ, ಮುಖ್ಯ ಶಿಕ್ಷಕಿ ಪ್ರೇಮಾ ರಾವ್ ಉಪಸ್ಥಿತರಿದ್ದರು.