
ನಗರದಲ್ಲಿ ಹಳೆ ಕರೆನ್ಸಿ ಪತ್ತೆ
Friday, March 14, 2025
ಮಂಗಳೂರು: ನಗರದ ಮೇರಿಹಿಲ್ ಮೈದಾನದಲ್ಲಿ ಚಲಾವಣೆಯಲ್ಲಿಲ್ಲದ 1000 ಹಾಗೂ 500 ರೂ. ಮುಖ ಬೆಲೆಯ ನೋಟುಗಳ ಕಂತೆ ಮಂಗಳವಾರ ಪತ್ತೆಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮೈದಾನದ ಬದಿ ಮಂಗಳವಾರ ಬೆಳಗ್ಗೆ ಚೀಲವೊಂದರಲ್ಲಿ ಇತರ ತ್ಯಾಜ್ಯದ ಜತೆ ನೋಟುಗಳು ಕಂಡು ಬಂದಿದೆ ಎನ್ನಲಾಗಿದೆ. ಆದರೆ ಸಂಜೆಯ ವೇಳೆಗೆ ಈ ನೋಟುಗಳು ನಾಪತ್ತೆಯಾಗಿದ್ದವು. ಯಾರೋ ಅದನ್ನು ಕೊಂಡೊಯ್ದಿರುವ ಸಾಧ್ಯತೆ ಇದೆ. ನೋಟು ಅಮಾನ್ಯಗೊಂಡ ಬಳಿಕ ಮನೆಯಲ್ಲಿ ಉಳಿದಿದ್ದ ಈ ನೋಟುಗಳನ್ನು ತಂದು ಮೈದಾನದ ಬದಿ ಬಿಸಾಡಿರುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.