
ವಾಹನಗಳಿಗೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬಳಕೆ
ಮಂಗಳೂರು: ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಾಹನಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಗೃಹ ಬಳಕೆಯ ಸಿಲಿಂಡರ್‌ಗಳನ್ನು ಉಪಯೋಗಿಸುವುದು ವ್ಯಾಪಕವಾಗಿದೆ. ಇದರಿಂದ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗುವ ಜತೆಗೆ ಸ್ಫೋಟ, ಬೆಂಕಿ ಅವಘಡ ಸಂಭವಿಸುವ ಭೀತಿ ಇದೆ ಎಂದು ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಎಚ್ಚರಿಕೆ ನೀಡಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದದ ಫೌಂಡೇಶನ್‌ನ ಕರ್ನಾಟಕ ವಿಭಾಗದ ಮುಖ್ಯಸ್ಥ ಚೇತನ್ ಕುಮಾರ್, ಆಟೋರಿಕ್ಷಾ, ಕಾರು ಮತ್ತಿತರ ವಾಹನಗಳಲ್ಲಿ ಅಕ್ರಮವಾಗಿ ಈ ರೀತಿಯಾಗಿ ಸಿಲಿಂಡರ್ ಬಳಕೆಯ ಬಗ್ಗೆ ನಾಗರಿಕರು ವಿಚಾರಿಸಬೇಕು. ಈ ಬಗ್ಗೆ ಈಗಾಗಲೇ ಫೌಂಡೇಶನ್ ವತಿಯಿಂದ ಜನಜಾಗೃತಿ ಅಭಿಯಾನ ಆರಂಭಿಸಿದೆ. ಇಂತಹ ಅಕ್ರಮಗಳು ಕಂಡು ಬಂದರೆ ನಾಗರಿಕರು ಪೊಲೀಸ್ ಹಾಗೂ ನಾಗರಿಕ ಸರಬರಾಜು ಇಲಾಖೆಗೆ ಮಾಹಿತಿ ನೀಡಬೇಕು. ಗೃಹ ಸಿಲಿಂಡರ್‌ಗಳನ್ನು ವಿತರಿಸುವಾಗ ಅದು ಸರಿಯಾಗಿದೆಯೇ ಎಂಬುದ್ನನು ಖಚಿತಪಡಿಸಿಕೊಳ್ಳಲು ಸೀಲ್ ಪರಿಶೀಲಿಸಬೇಕು. ಖಾಲಿ ಸಿಲಿಂಡರ್‌ಗಳು ಮತ್ತು ಪೂರ್ಣ ಸಿಲಿಂಡರ್‌ಗಳ ತೂಕ ಪರಿಶೀಲಿಸುವುದು ನಾಗರಿಕರ ಹಕ್ಕು ಎಂದು ಅವರು ಹೇಳಿದರು.
ಸಿಲಿಂಡರ್ ಬೆಲೆ ಏರಿಕೆಯಿಂದ ಗ್ರಾಹಕರು ಮಿತವಾಗಿ ಬಳಸುತ್ತಿದ್ದಾರೆ. ಬಹುತೇಕವಾಗಿ ಕುಟುಂಬವೊಂದರಲ್ಲಿ ಎರಡರಿಂದ ಮೂರು ತಿಂಗಳ ಅವಧಿಗೆ ಒಂದು ಸಿಲಿಂಡರ್ ಬಳಕೆಯಾಗುತ್ತದೆ. ಗೃಹ ಬಳಕೆಗೆ ವಾರ್ಷಿಕ 12 ಸಿಲಿಂಡರ್‌ಗಳ ಮಿತಿ ಇದೆ. ಕೆಲವೊಂದು ಗ್ಯಾಸ್ ಏಜೆನ್ಸಿಗಳು ಅಟೋ ಬುಕ್ಕಿಂಗ್ ಮೂಲಕ ಕುಟುಂಬಗಳಿಂದ ನಿಗದಿತ ಮಿತಿಯಲ್ಲಿ ಉಳಿಕೆಯಾಗುವ ಸಿಲಿಂಡರ್‌ಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿವೆ. ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ರಿಫಿಲ್ಲಿಂಗ್ ಮಾಡುವ ಅಪಾಯಕಾರಿ ಕ್ರಮವನ್ನೂ ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಎಚ್ಚೆತ್ತಕೊಳ್ಳಬೇಕಾಗಿದೆ. ದ.ಕ. ಜಿಲ್ಲೆಯಲ್ಲೂ ಇಂತಹ ಕೆಲವೊಂದು ಪ್ರಕರಣಗಳ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಜಿಲ್ಲೆಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.
ಐಒಸಿಎಲ್, ಬಿಪಿಸಿಎಲ್, ಎಚ್‌ಪಿಸಿಲ್ ತೈಲ ಕಂಪನಿಗಳು ಗ್ರಾಹಕರಿಗೆ ಪ್ರತಿ ವರ್ಷ ಕೆವೈಸಿ ಕಡ್ಡಾಯಗೊಳಿಸುವ ಅಗತ್ಯವಿದೆ. ಕೆವೈಸಿ ಮಾಡಿದ ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಬುಕ್ ಮಾಡಿದ ನಂತರ ಒಟಿಪಿ ಅನ್ನು ಕಳುಹಿಸಬೇಕು. ಸಿಲಿಂಡರ್ ವಿತರಿಸುವಾಗ ಒಟಿಪಿ ನಮೂದಿಸಿದ ಬಿಲ್ ರಚಿಸುವ ವ್ಯವಸ್ಥೆ ಮಾಡಬೇಕು. ಡೆಲಿವರಿ ಅಥೆಂಟಿಕೇಶನ್ ಕೋಡ್ ಅಥವಾ ಬಾರ್ಕೋಡ್ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಫೌಂಡೇಶನ್‌ನ ಆಡಳಿತಾಧಿಕಾರಿ ಪ್ರಶಾಂತ್ ಜಾಮಗಡೆ, ಉತ್ತರ ಕರ್ನಾಟಕ ವಿಭಾಗದ ಮುಖ್ಯಸ್ಥ ಅರುಣ ಮಾನಗಾಂವೆ ಉಪಸ್ಥಿತರಿದ್ದರು.