
ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ
ಮಂಗಳೂರು: ರಸ್ತೆ ರಿಪೇರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಟೋಲ್ ವಿರೋಧಿ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಮತ್ತಿತರರ ಮೇಲೆ ಕಾವೂರು ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕೂಳೂರು ರಸ್ತೆ ರಿಪೇರಿಗೆ ಆಗ್ರಹಿಸಿ ಟೋಲ್ ವಿರೋಧಿ ಹೋರಾಟ ಸಮಿತಿಯು 2024 ನವೆಂಬರ್ 26 ರಂದು ಪ್ರತಿಭಟನೆ ನಡೆಸಿತ್ತು. ಈ ಸಂಬಂಧ ಕಾವೂರು ಪೊಲೀಸರು ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಜ್, ಸುನೀಲ್ ಕುಮಾರ್ ಬಜಾಲ್, ಮಂಜುಳಾ ನಾಯಕ್, ಶ್ರೀನಾಥ್ ಕುಲಾಲ್, ರಾಘವೇಂದ್ರ, ಯಾದವ ಶೆಟ್ಟಿ, ದಯಾನಂದ ಶೆಟ್ಟಿ ವಿರುದ್ದ ಎಫ್‌ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ನ್ಯಾಯಾಲಯವು ಹೋರಾಟಗಾರರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.
ಹೋರಾಟಗಾರರ ಮೇಲಿನ ಈ ಎಫ್‌ಐಆರ್ ರದ್ದುಗೊಳಿವಂತೆ ಕರ್ನಾಟಕ ಹೈಕೋರ್ಟ್ ನಲ್ಲಿ ಹೋರಾಟಗಾರರ ಪರವಾಗಿ ಹಿರಿಯ ನ್ಯಾಯವಾದಿ ಎಸ್ ಬಾಲನ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಜಸ್ಟಿಸ್ ಹೇಮಂತ್ ಚಂದನ್ ಗೌಡರ್ ಅವರು ಎಫ್‌ಐಆರ್ ಗೆ ತಡೆಯಾಜ್ಞೆ ನೀಡಿದ್ದಾರೆ.
ಬಿಎನ್‌ಎಸ್ ಸೆಕ್ಷನ್ 189, 190 ಅಡಿಯಲ್ಲಿ ಹೇಗೆ ವಿಚಾರಣೆ ಮಾಡಲು ಸಾದ್ಯ? ಬಿಎನ್‌ಎಸ್ ಸೆಕ್ಷನ್ 3(5) ಅನ್ನು ಹಾಕದೆಯೇ ಈ ಸೆಕ್ಷನ್ ಗಳಡಿಯಲ್ಲಿ ವಿಚಾರಣೆ ಮಾಡಲು ಸಾದ್ಯವೇ? ಜನ ಗುಂಪು ಸೇರಿ ಶಾಂತಿಯುತ ಪ್ರತಿಭಟನೆ ಮಾಡಿರುವುದಕ್ಕೆ ಎಫ್‌ಐಆರ್ ಮಾಡುವ ಅಗತ್ಯ ಏನಿದೆ? ಎಂದು ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
’ಸಾರ್ವಜನಿಕ ರಸ್ತೆ ದುರಸ್ಥಿಗೆ ಆಗ್ರಹಿಸಿದವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇದು ನಾಗರಿಕರ ಮೂಲಭೂತ ಕರ್ತವ್ಯಗಳ ಉಲ್ಲಂಘನೆಯಾಗಿದೆ. ಭಾರತದ ಸಂವಿಧಾನದ ಪರಿಚ್ಛೇದ ೫೧ಎ ನಲ್ಲಿ ನಾಗರಿಕರ ಮೂಲಭೂತ ಕರ್ತವ್ಯಗಳನ್ನು ವಿವರಿಸಲಾಗಿದೆ. ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತಪ್ಪಿಸುವುದು ನಾಗರಿಕರಿಗೆ ಸಂವಿಧಾನ ಕೊಡಮಾಡಿದ ಮೂಲಭೂತ ಕರ್ತವ್ಯವಾಗಿದೆ’ ಎಂದು ಹೋರಾಟಗಾರರ ಪರ ವಕೀಲ ಎಸ್ ಬಾಲನ್ ವಾದ ಮಂಡಿಸಿದರು.
ವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್, ಎಫ್‌ಐಆರ್ ಗೆ ತಡೆಯಾಜ್ಞೆ ನೀಡಿ, ಮಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೂ ತಡೆಯಾಜ್ಞೆ ನೀಡಿದ್ದಾರೆ. ಕಾವೂರು ಪೊಲೀಸರಿಗೆ ತುರ್ತು ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್ ಟೋಲ್ ವಿರೋಧಿ ಹೋರಾಟಗಾರರಿಗೆ ರಿಲೀಫ್ ನೀಡಿದೆ.
ವಕೀಲರಾದ ರಕ್ಷಿತಾ ಸಿಂಗ್ ಸಹಕರಿಸಿದರು.