
ಕಾನೂನು ಕ್ರಮಕ್ಕೆ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ
ಮಂಗಳೂರು: ಫರಂಗಿಪೇಟೆಯ ಯುವಕ ದಿಗಂತ್ ನಾಪತ್ತೆಯಾಗಿದ್ದ ವೇಳೆ ಪ್ರಕರಣದ ಬಗ್ಗೆ ಕೋಮು ಬಣ್ಣ ಹಚ್ಚಿ ಮತೀಯ ಸಂಘರ್ಷಕ್ಕೆ ಶಾಸಕರ ಸಹಿತ ಸಂಘ ಪರಿವಾರದ ಪ್ರಮುಖರು ಪ್ರಯತ್ನಿಸಿದ್ದು, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪಶ್ಚಿಮ ವಲಯ ಐಜಿಪಿಗೆ ಮನವಿ ಸಲ್ಲಿಸಲಾಯಿತು.
ಪೊಲೀಸ್ ಇಲಾಖೆಯ ಶ್ರಮದ ಕಾರಣ ಯುವಕ ದಿಗಂತ್‌ನ ಸುರಕ್ಷಿತ ಪತ್ತೆಯ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ ನಾಪತ್ತೆ ವಿಚಾರ ಬಹಿರಂಗಗೊಂಡ ತಕ್ಷಣ ಬಜರಂಗ ದಳ ಸಹಿತ ಸಂಘ ಪರಿವಾರದ ಸಂಘಟನೆಗಳು ಹಾಗೂ ಬಿಜೆಪಿಯ ಪ್ರಮುಖರು, ಪ್ರಕರಣಕ್ಕೆ ಕೋಮು ಬಣ್ಣ ಬಳಿದು ಎರಡು ಸಮುದಾಯಗಳ ನಡುವೆ ಸಂಘರ್ಷ ಹುಟ್ಟುಹಾಕುವ ಯತ್ನ ನಡೆಸಿದ್ದಾರೆ. ಯಾವುದೇ ಆಧಾರವಿಲ್ಲದೆ ವಿದ್ಯಾರ್ಥಿ ದಿಗಂತ್‌ನನ್ನು ಅಪಹರಣ ಮಾಡಲಾಗಿದೆ. ಮುಸ್ಲಿಂ ಸಮುದಾಯ ಈ ಘಟನೆಯ ಹಿಂದಿದೆ ಎಂದು ಕತೆ ಕಟ್ಟಲಾಗಿದೆ. ಮಾಧ್ಯಮಕ್ಕೂ ಅದೇ ರೀತಿಯ ಹೇಳಿಕೆ ನೀಡಲಾಗಿದೆ. ಮಾತ್ರವಲ್ಲದೆ, ಫರಂಗಿಪೇಟೆ ಪರಿಸರದಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳನ್ನೇ ಗುರಿಯಾಗಿಸಿ ಅಮ್ಮೆಮಾರ್ ಪ್ರದೇಶದಲ್ಲಿ ಬಹು ಸಂಖ್ಯಾತರು ಓಡಾಡುವುದೇ ಕಷ್ಟವಾಗಿದೆ. ಅಲ್ಲಿ ಓಡಾಡುವವರಿಗೆ ಜೀವ ಭಯ ಒಡ್ಡಲಾಗಿದೆ. ಗಾಂಜಾ ವ್ಯಸನಿಗಳು, ಪೆಡ್ಲರ್‌ಗಳು, ಕ್ರಿಮಿನಲ್ಗಳು ಅಮ್ಮೆಮಾರ್‌ನಲ್ಲಿ ತುಂಬಿಕೊಂಡಿದ್ದಾರೆ ಎಂದು ಒಂದು ಊರು ಹಾಗೂ ಸಮುದಾಯವನ್ನು ಅಪರಾಧಿಗಳನ್ನಾಗಿಸಿ ಪೂರ್ವಾಗ್ರಹಗಳನ್ನು ಹುಟ್ಟಿಸುವ ಯತ್ನ ನಡೆದಿದೆ. ಪ್ರಕರಣದ ತನಿಖೆಗೆ ಅವಕಾಶ ನೀಡದೆ ಮತೀಯತೆ ಆಧಾರದಲ್ಲಿ ಪ್ರತಿಭಟನೆ, ಬಂದ್ ನಡೆಸಿ ಪೊಲೀಸ್ ಇಲಾಖೆಯನ್ನು ಒತ್ತಡಕ್ಕೆ ಸಿಲುಕಿಸಲಾಗಿದೆ. ಪೊಲೀಸ್ ಇಲಾಖೆಯನ್ನು ಕ್ರಿಮಿನಲ್ ಸಮುದಾಯದ ಪಕ್ಷಪಾತಿಗಳು ಎಂದು ಆರೋಪಿಸಲಾಗಿದೆ. ಬಿಜೆಪಿ ಶಾಸಕರಾದ ಭರತ್ ಶೆಟ್ಟಿ, ಹರೀಶ್ ಪೂಜಾ ಹಾಗೂ ಸಂಘ ಪರಿವಾರದ ಸ್ಥಳೀಯ ನಾಯಕರು ದ್ವೇಷ ಭಾಷಣ ಮಾಡಿದ್ದಾರೆ. ಇದು ನೆಲದ ಕಾನೂನು ಹಾಗೂ ಸಂವಿಧಾನದ ಜಾತ್ಯತೀತ ಆಶಯ, ನಿಯಮಗಳಿಗೆ ವಿರುದ್ಧವಾಗಿದೆ. ಕೋಮು ಸೂಕ್ಷಮ ಪ್ರದೇಶಗಳು ಎಂದು ಗುರುತಿಸಲಾಗಿರುವ ಫರಂಗಿಪೇಟೆ, ಬಂಟ್ವಾಳ, ಮಂಗಳೂರಿನಲ್ಲಿ ಇಂತಹ ನಡೆಗಳು ದೊಡ್ಡ ಸಂಘರ್ಷಕ್ಕೆ ಕಾರಣವಾಗುವ ಸ್ಯಾತೆ ಇದೆ. ಹಾಗಾಗಿ ಪ್ರಚೋದನಾಕಾರಿ ಭಾಷಣ ಮಾಡಿದ ಶಾಸಕ ಭಾರತ ಶೆಟ್ಟಿ, ಹರೀಶ್ ಪೂಂಜಾ ಹಾಗೂ ಬಜರಂಗದಳದ ಭರತ್ ಕುಂಬ್ಡೇಲು ಮತ್ತಿತರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಣೆಯಿಂದ ಮೊಕ್ಕದ್ದಮೆ ಹೂಡಬೇಕು ಎಂದು ನಿಯೋಗವು ಮನವಿಯಲ್ಲಿ ಆಗ್ರಹಿಸಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಮಾಜಿ ಮೇಯರ್ ಅಶ್ರಫ್ ಕೆ., ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರಾದ ಮಂಜುಳಾ ನಾಯಕ್, ಪ್ರಮೀಳಾ ದೇವಾಡಿಗ, ಬಿ. ಶೇಖರ್, ಸಂತೋಷ್ ಬಜಾಲ್, ವಿ. ಕುಕ್ಯಾನ್, ಜಯಂತಿ ಬಿ. ಶೆಟ್ಟಿ, ಎಸ್.ಎಲ್. ಪಿಂಟೋ, ಸದಾಶಿವ ಪಡುಬಿದ್ರೆ, ಸರೋಜಿನಿ ಬಂಟ್ವಾಳ, ಬಿ.ಕೆ. ಇಮ್ತಿಯಾಝ್, ವಿನುಶ ರಮಣ, ಮನೋಜ್ ವಾಮಂಜೂರು, ಎಚ್.ವಿ. ರಾವ್, ಸೀತಾರಾಮ ಬೇರಿಂಜ, ಸಮರ್ಥ್ ಭಟ್, ಕರುಣಾಕರ್ ಮೊದಲಾದವರು ಉಪಸ್ಥಿತರಿದ್ದರು.