
ಗ್ಯಾರಂಟಿ ಯೋಜನೆಗಾಗಿ ಬಡವರ ಹಕ್ಕು ಕಸಿಯುತ್ತಿರುವ ಸರಕಾರ: ಎನ್. ರವಿಕುಮಾರ್
ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆಂದು ಮೀಸಲಿಟ್ಟ 25,426.68 ಕೋಟಿ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಬಡವರ ಹಕ್ಕನ್ನು ಕಸಿದುಕೊಂಡಿದೆ. ಇದರ ವಿರುದ್ಧ ರಾಜ್ಯಾದ್ಯಂತ ಜನಾಂದೋಲನ ನಡೆಸಲಾಗುತ್ತಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಗಾಗಿ ಮೀಸಲಿಟ್ಟ ಕೋಟ್ಯಂತರ ಮೊತ್ತವನ್ನು ದುರ್ಬಳಕೆ ಮಾಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟ ನಿಧಿಯನ್ನು ಮತ್ತೆ ದುರ್ಬಳಕೆ ಮಾಡಲು ಬಜೆಟ್ ಬರುವುದನ್ನೇ ಕಾಯುತ್ತಿದೆ. 15 ಸಾವಿರ ಕೋಟಿ ರೂ ಪ್ರಸ್ತಾವನೆ ಸಿದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಉದ್ಧಾರ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೋಗಸ್ ಸ್ಟೇಟ್‌ಮೆಂಟ್ ಅಷ್ಟೆ. 2024-25ರಲ್ಲಿ ಪರಿಶಿಷ್ಟ ಜಾತಿಯ ಅಭಿವೃದ್ಧಿಗೆಂದು 28,329 ಕೋಟಿ 62 ಲಕ್ಷ ಹಾಗೂ ಪರಿಶಿಷ್ಟ ಪಂಗಡಕ್ಕೆ 11,585 ಕೋಟಿ 26 ಲಕ್ಷ ಅನುದಾನ ಮೀಸಲಾಡಿಲಾಗಿತ್ತು. ಆದರೆ ಎಸ್‌ಎಸ್‌ಟಿಗೆಂದು 23,485 ಕೋಟಿ 70 ಲಕ್ಷ ಅನುದಾನ ಖರ್ಚಾಗಿದ್ದು, 19 ಸಾವಿರ ಕೋಟಿಯಷ್ಟು ಹಣ ಖರ್ಚಾಗದೆ ಉಳಿದಿದೆ. ಒಂದೆಡೆ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಎಸ್‌ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಿಟ್ಟ ಅನುದಾವನ್ನು ಇತರ ಯೋಜನೆಗಳಿಗೆ ಬಳಸಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ತೀವ್ರ ರೀತಿಯ ಹೋರಾಟ ನಡೆಸುತ್ತಲೇ ಬಂದಿದೆ ಎಂದವರು ಹೇಳಿದರು.
ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮಾತನಾಡಿ, ರಾಜ್ಯದ ಇಷ್ಟು ವರ್ಷಗಳ ಆಡಲಿತದಲ್ಲಿ ಯಾವ ಸರ್ಕಾರವೂ ಪರಿಶಿಷ್ಟ ಸಮುದಾಯದ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಆದರೆ ಸಿದ್ದರಾಮಯ್ಯ ಅವರು ದಲಿತೋದ್ಧಾರಕ ಎಂದು ಹೇಳಿಕೊಂಡು ಅವರಿಗೆ ಮೀಸಲಿಟ್ಟ ಅನುದಾನವನ್ನೇ ಬಳಸಿಕೊಂಡಿರುವುದು ಖೇದಕರ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಪ್ರಮುಖರಾದ ಹರ್ಷವರ್ಧನ್, ದಿನಕರ ಬಾಬು, ಗೋಪಾಲ್, ಗಂಗಪ್ಪ ಸಾಬೂ ದೊಡ್ಡಮನಿ, ಯತೀಶ್ ಆರ್ವರ್ ಮತ್ತಿತರರು ಉಪಸ್ಥಿತರಿದ್ದರು.