ಡಿಸಿಆರ್‌ಇ ಘಟಕ ಪೊಲೀಸ್ ಠಾಣೆಯಾಗಿ ಪರಿವರ್ತನೆ ಅನುಷ್ಠಾನದಲ್ಲಿ ಲೋಪವಾಗಬಾರದು: ಲೋಲಾಕ್ಷ

ಡಿಸಿಆರ್‌ಇ ಘಟಕ ಪೊಲೀಸ್ ಠಾಣೆಯಾಗಿ ಪರಿವರ್ತನೆ ಅನುಷ್ಠಾನದಲ್ಲಿ ಲೋಪವಾಗಬಾರದು: ಲೋಲಾಕ್ಷ


ಮಂಗಳೂರು: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರಕ್ಕೆ ನೆರವಾಗಲು ರಾಜ್ಯದಲ್ಲಿ 1974 ರಲ್ಲಿ ಸ್ಥಾಪಿಸಲಾಗಿದ್ದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ)ವನ್ನು ೩೩ ವಿಶೇಷ ಪೊಲೀಸ್ ಠಾಣೆಗಳನ್ನಾಗಿ ಪರಿವರ್ತಿಸಲು ಸರ್ಕಾರ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಈ ಯೋಜನೆ ಕಾನೂನುಗಳ ಆಶಯದಂತೆ ಅನುಷ್ಠಾನಗೊಳ್ಳಲು ಈ ಎಲ್ಲ ವಿಶೇಷ ಪೊಲೀಸ್ ಠಾಣೆಗಳಿಗೆ ಸಾಕಷ್ಟು ಅಧಿಕಾರಿಗಳು, ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ-ಸಂಸ್ಥೆಗಳ ಮಹಾ ಒಕ್ಕೂಟ ಆಗ್ರಹಿಸಿದೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಮಹಾ ಒಕ್ಕೂಟ ಅಧ್ಯಕ್ಷ ಲೋಲಾಕ್ಷ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರ ವಿರುದ್ಧ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ದೂರು ದಾಖಲಿಸಿ, ನಿಗದಿತ ಅವಧಿಯಲ್ಲಿ ಸೂಕ್ತ ತನಿಖೆ ನಡೆಸಿ, ನ್ಯಾಯಾಲಯಗಳಿಗೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲು ಪ್ರತಿ ಜಿಲ್ಲೆಗೆ ಒಂದರಂತೆ ಡಿಸಿಆರ್‌ಇ ವಿಶೇಷ ಪೊಲೀಸ್ ಠಾಣೆಗಳ ಸ್ಥಾಪನೆಯನ್ನು ಪ್ರಸ್ತಾಪಿಸಿದೆ.

ದೌರ್ಜನ್ಯಕ್ಕೊಳಗಾದ ಸಂತ್ರಸ್ತರು ತಮ್ಮ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಬಹುದು ಅಥವಾ ಜಿಲ್ಲಾ ಕೇಂದ್ರದಲ್ಲಿರುವ ಈ ವಿಶೇಷ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಸ್ಥಳೀಯ ಠಾಣೆಯಲ್ಲಿ ಎಫ್‌ಐಆರ್ ದಾಖಲು ಆಗಿದ್ದಲ್ಲಿ ಅಲ್ಲಿನ ಪೊಲೀಸರು ಅದನ್ನು ತಕ್ಷಣವೇ ಈ ವಿಶೇಷ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಬೇಕು ಎಂದಿದೆ.

ಡಿಸಿಆರ್‌ಇ ಘಟಕಗಳನ್ನು ಪೊಲೀಸ್ ಠಾಣೆಗಳನ್ನಾಗಿ ಪರಿವರ್ತನೆ ಮಾಡುವ ಆಶಯ ಉತ್ತಮವಾದರೂ ಅನುಷ್ಠಾನದಲ್ಲಿ ಯಾವುದೇ ಲೋಪವಾದರೆ, ಅದು ಪರಿಶಿಷ್ಟ ಜನ ಸಮುದಾಯಗಳ ಬದುಕಿನ ಮೇಲೆ ಅತ್ಯಂತ ಅಪಾಯಕಾರಿ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾದೀತು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪರಿಶಿಷ್ಟ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಪರಿಣಾಮಕಾರಿ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸಬೇಕಾದ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯು, ಕಾನೂನು ನಿಯಮಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವ, ಸಾಮಾಜಿಕ ಬದ್ಧತೆ ಮತ್ತು ಕಾಳಜಿ ಇರುವ ವ್ಯಕ್ತಿಗಳನ್ನು ಒಳಗೊಂಡಿರಬೇಕು. ಆದರೆ ನಮ್ಮ ಜಿಲ್ಲೆಯಲ್ಲಿ ಪರಿಸ್ಥಿತಿ ಭಿನ್ನ ಇರುವುದರಿಂದ, ಅದನ್ನು ಬದಲಿಸಲು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.

ಮುಖಂಡರಾದ ಕಾಂತಪ್ಪ ಆಲಂಗಾರು, ಜನಾರ್ದನ ಬೋಳಂತೂರು, ದಯಾನಂದ್, ರಾಜಾ ಚಂಡ್ತಿಮಾರ್, ಲಕ್ಷ್ಮಣ ಕಾಂಚನ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article