
ಬಜಟ್‌ನಲ್ಲಿ ದ.ಕ. ಕಡೆಗಣನೆ: ಬಿಜೆಪಿ ಪ್ರತಿಭಟನೆ
ಮಂಗಳೂರು: ನಮ್ಮ ತೆರಿಗೆ, ನಮ್ಮ ಹಕ್ಕು ಎಂದು ಎಂದು ಡಂಗುರ ಸಾರಿದ ಸಿಎಂ ಸಿದ್ದರಾಮಯ್ಯ ಅವರು ಈಗ ಬಜೆಟ್‌ನಲ್ಲಿ ದ.ಕ. ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ. ಹಿಂದುಗಳ ತೆರಿಗೆ, ಮುಸ್ಲಿಮರ ಹಕ್ಕು ಎನ್ನುವಂತಾಗಿದೆ. ಇದರಿಂದ ಬಹುಸಂಖ್ಯಾತ ಹಿಂದುಗಳಿಗೆ ಅನ್ಯಾಯ ಮಾಡಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ನಿರ್ಲಕ್ಷ್ಯ, ಅಲ್ಪಸಂಖ್ಯಾತರ ಓಲೈಕೆ ವಿರೋಧಿಸಿ ದ.ಕ. ಬಿಜೆಪಿ ವತಿಯಿಂದ ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿ ಎದುರು ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆ ಮೇಲ್ದರ್ಜೆಗೆ ಏರಿಸಿದರೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುದಾನ ತೋರಿಸಿಲ್ಲ. ಮೀನುಗಾರಿಕೆ ಅಭಿವೃದ್ಧಿಗೆ ಹೊಸ ಯೋಜನೆ ಇಲ್ಲ. ಬದಲು ಖಬರಸ್ಥಾನಕ್ಕೆ ಅನುದಾನ ಘೋಷಿಸಲಾಗಿದೆ. ಎಸ್‌ಟಿ ಎಸ್‌ಸಿ ಗಳಿಗೆ ಅಗತ್ಯ ಅನುದಾನ ಮೀಸಲಿರಿಸಿಲ್ಲ. 1 ಸಾವಿರ ಕೋಟಿ ರೂ.ಗಳನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಲಾಗಿದೆ. ಸದೃಢ ಸರ್ಕಾರ ಎಂದು ಹೇಳಿದರೂ ಭರವಸೆ ಮಾತ್ರ, ಅನುಷ್ಠಾನ ವಿಫಲ. ಜೆಲ್ಲೆಯ ಕಾಂಗ್ರೆಸ್ ಮುಖಂಡರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಬಜೆಟ್ ಘೋಷಣೆಯಲ್ಲಿ ಮಾತ್ರ, ಅನುಷ್ಠಾನ ಆಗುವುದಿಲ್ಲ. ಇದು ಜನವಿರೋಧಿ ಸರ್ಕಾರವಾಗಿದೆ ಎಂದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ. ಮಂಜುಳಾ ರಾವ್ ಮಾತನಾಡಿ, ಮಹಿಳೆಯ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಆಡಳಿತಕ್ಕೆ ಬಂದ ರಾಜ್ಯ ಸರ್ಕಾರ ಮಹಿಳೆಯರಿಗೆ ಶೂನ್ಯ ಬಜೆಟ್ ಕೊಟ್ಟಿದೆ. ಮಹಿಳೆಯರನ್ನು ತುಳಿಯುವ ಕೆಲಸ ಮಾಡಿದೆ. ನಿಗದಿತ ದಿನಾಂಕದಂದು ಮಹಿಳೆಯರ ಖಾತೆಗೆ 2 ಸಾವಿರ ರೂ. ಪಾವತಿಸುತ್ತಿಲ್ಲ. ಎರಡ್ಮೂರು ತಿಂಗಳಿಗೊಮ್ಮೆ ಪಾವತಿಸುತ್ತಿದ್ದಾರೆ. ಸರ್ಕಾರದ ಈ ಗ್ಯಾರಂಟಿಗಳನ್ನು ನಂಬುವಷ್ಟು ಮಹಿಳೆಯರು ಮೂರ್ಖರಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಬಜೆಟ್‌ನಲ್ಲಿ ಚೆಂಬು ಕೊಟ್ಟಿದ್ದಾರೆ. ಹೋರಾಟ ಮಾಡಿದವರ ಮುಂಗೈಗೆ ಬೆಲ್ಲ ಮುಟ್ಟಿಸಿದ್ದಾರೆ. ಯಾರನ್ನೋ ಓಲೈಸಲು ಇತರರನ್ನು ಕಡೆಗಣಿಸಿದ್ದಾರೆ. ಮಹಿಳೆಯರು ಮನಸ್ಸು ಮಾಡಿದರೆ ಸಿಎಂ ಗದ್ದುಗೆಯಿಂದ ಇಳಿಯಲೇ ಬೇಕು. ಸಿಎಂ ಗದ್ದುಗೆಯಿಂದ ಇಳಿದ ದಿನವೇ ನಮಗೆ ಮಹಿಳಾ ದಿನಾಚರಣೆ ಎಂದರು.
ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಯತೀಶ್ ಆರ್ವಾರ್, ರವಿಶಂಕರ್ ಮಿಜಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ರಮೇಶ ಕಂಡೆಟ್ಟು, ರಾಕೇಶ್ ರೈ, ಶಾಂತಿಪ್ರಸಾದ್ ಹೆಗ್ಡೆ, ಪೂರ್ಣಿಮಾ, ಕವಿತಾ ಸನಿಲ್, ಮನೋಜ್ ಕುಮಾರ್, ದಿವಾಕರ ಪಾಂಡೇಶ್ವರ, ವಸಂತ ಪೂಜಾರಿ ಮತ್ತಿತರರಿದ್ದರು.
ಬಳಿಕ ಬಿಜೆಪಿ ಕಚೇರಿಯಿಂದ ನವಭಾರತ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಪಿವಿಎಸ್ ಜಂಕ್ಷನ್‌ಗೆ ಸಾಗಿ, ಅಲ್ಲಿಂದ ವಾಪಸ್ ಪಕ್ಷದ ಕಚೇರಿಗೆ ಆಗಮಿಸಿ ಕೊನೆಗೊಳಿಸಲಾಯಿತು.