
ಸಮಾಜ ಸೇವೆಯಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್
ಮಂಗಳೂರು: ಸಮಾಜ ಸೇವೆಯಲ್ಲಿ ನೀಡಿರುವ ಅತ್ಯಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯದ ಪ್ರಮುಖ ಸಹಕಾರಿ ಧುರೀಣ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಘೋಷಣೆ ಮಾಡಿದೆ.
ಮಂಗಳೂರು ವಿವಿಯಲ್ಲಿ ಮಾ.29 ರಂದು ನಡೆಯಲಿರುವ 43ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಪದವಿ ಪ್ರದಾನ ಮಾಡಲಿದ್ದಾರೆ. ಈ ಮೂಲಕ ಅವರಿಗೆ ಎರಡನೇ ಗೌರವ ಡಾಕ್ಟರೇಟ್ ಪದವಿ ಸಿಕ್ಕಿದಂತಾಗಿದೆ. ಈ ಹಿಂದೆ ಅವರಿಗೆ 2013ರಲ್ಲಿ ಶ್ರೀಲಂಕಾದ ಕೊಲಂಬೊ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿತ್ತು.
ಸಹಕಾರ, ಸಾಮಾಜಿಕ, ಬ್ಯಾಂಕಿಂಗ್, ಧಾರ್ಮಿಕ... ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧಕರಾಗಿ, ನವೋದಯ ಸ್ವ ಸಹಾಯ ಸಂಘಗಳ ಹರಿಕಾರರಾಗಿ ಅಪೂರ್ವ ಪರಂಪರೆಯನ್ನು ರೂಪಿಸಿದ ರಾಜೇಂದ್ರ ಕುಮಾರ್ ರಾಜ್ಯದ ಧೀಮಂತ ಸಹಕಾರಿ ನಾಯಕರಲ್ಲಿ ಒಬ್ಬರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರೂ ಆಗಿರುವ ಅವರು ಸಹಕಾರಿ ಬ್ಯಾಂಕಿಂಗ್ ಹಾಗೂ ಸಾಮಾಜಿಕ ರಂಗದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಸಾಮಾಜಿಕ ಸ್ಪಂದನೆಯ ಕಾರ್ಯಗಳನ್ನು ಪರಿಗಣಿಸಿ ಇವರಿಗೆ ಹಲವಾರು ರಾಷ್ಟ್ರೀಯ-ಅಂತರರಾಷ್ಟೀಯ ಪ್ರಶಸ್ತಿಗಳು ಲಭಿಸಿವೆ.
ಸಹಕಾರಿ ರಂಗದ ಅಪೂರ್ವ ಸಾಧಕರು:
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ಥಕ, ಪ್ರಾಮಾಣಿಕ ಸೇವೆಯನ್ನು ಕಳೆದ 31 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಮಾಡುತ್ತಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಈ ಬ್ಯಾಂಕ್‌ನ್ನು ಅತ್ಯುನ್ನತ ಮಟ್ಟಕ್ಕೇರಿಸಿದ್ದಾರೆ. ಕೋರ್ ಬ್ಯಾಂಕಿಂಗ್‌ನಂತಹ ಉತ್ಕೃಷ್ಟ ತಂತ್ರಜ್ಞಾನವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ಶ್ರೇಯಸ್ಸು ರಾಜೇಂದ್ರ ಕುಮಾರ್ ಅವರದ್ದು, ಸುಸಜ್ಜಿತ ವಾಹನದಲ್ಲಿ ಮೊಬೈಲ್ ಬ್ಯಾಂಕ್ ಸೇವೆಯನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಕೂಡ ಇವರದ್ದು. ನವೋದಯ ಸ್ವ ಸಹಾಯ ಸಂಘಗಳ ಹರಿಕಾರರಾಗಿ ಅಪೂರ್ವ ಪರಂಪರೆಯನ್ನು ರೂಪಿಸಿದ ಅವರು ಮುಖ್ಯವಾಗಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಶಸ್ತಯ ನವೋದಯ ಸ್ವಸಹಾಯ ಸಂಘಗಳ ಮೂಲಕ ನೀಡಿ, ಆರ್ಥಿಕ ಚೈತನ್ಯವನ್ನು ತುಂಬಿದ್ದಾರೆ.
ಸಾಧನೆಗೆ ಹುಡುಕಿಕೊಂಡು ಬಂದ ಪ್ರಶಸ್ತಿಗಳ ಸುರಿಮಳೆ:
ಕರ್ನಾಟಕ ಸರಕಾರದಿಂದ ‘ಸಹಕಾರ ರತ್ನ’ ‘ಸಹಕಾರ ವಿಶ್ವ ಬಂಧುಶ್ರೀ’, ‘ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ’, ‘ಮಹಾತ್ಮಾ ಗಾಂಧಿ ಸಮ್ಮಾನ್ ಪ್ರಶಸ್ತಿ’, ‘ಬೆಸ್ಟ್ ಚೇರ್‌ಮೆನ್ ನ್ಯಾಷನಲ್ ಎವಾರ್ಡ್’, ‘ನ್ಯಾಷನಲ್ ಎಕ್ಸ್ ಲೆನ್ಸ್ ಎವಾರ್ಡ್’, ‘ಔಟ್ ಸ್ಟೆಂಡಿಂಗ್ ಗ್ಲೋಬಲ್ ಲೀಡರ್ ಶಿಪ್ ಎವಾರ್ಡ್’, ಬಹು ಪ್ರಭಾವಶಾಲಿ ಸಹಕಾರ ನಾಯಕ ಪ್ರಶಸ್ತಿ, ಅಂತಾರಾಷ್ಟಿಯ ಶ್ರೇಷ್ಠ ನಾಯಕತ್ವ ಎವಾರ್ಡ್, ಅಂತಾರಾಷ್ಟೀಯ ಸಾಧಕ ಪ್ರಶಸ್ತಿ, ಮದರ್ ತೆರೆಸಾ ಮೆಮೊರಿಯಲ್ ನ್ಯಾಶನಲ್ ಎವಾರ್ಡ್ ಹಾಗೂ ಏಶ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್‌ನಿಂದ ಉಜ್ವಲ ಉದ್ಯಮಿ ಪ್ರಶಸ್ತಿ ಹೀಗೆ ಹಲವಾರು ರಾಷ್ಟೀಯ, ಅಂತಾರಾಷ್ಟೀಯ ಪ್ರಶಸ್ತಿಗಳು ಅವರಿಗೆ ಸಂದಿವೆ.
ಎಸ್‌ಸಿಡಿಸಿಸಿ ಬ್ಯಾಂಕಿನ ಸರ್ವಾಂಗೀಣ ಪ್ರಗತಿಯ ರೂವಾರಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಅಧ್ಯಕ್ಷರಾದ ಬಳಿಕ ಎಸ್‌ಸಿಡಿಸಿಸಿ ಬ್ಯಾಂಕಿಗೆ 22 ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಹಾಗೂ 19 ಬಾರಿ ನಬಾರ್ಡ್ ಪ್ರಶಸ್ತಿ, 3 ಬಾರಿ ಬ್ಯಾಂಕಿಂಗ್ ಪ್ರೊಂಟಿಯರ್ಸ್ ಪ್ರಶಸ್ತಿ ಹಾಗೂ 4 ಬಾರಿ ಎಪಿವೈ ರಾಷ್ಟೀಯ ಪ್ರಶಸ್ತಿಯೂ ಲಭಿಸಿದೆ.