
ಪದವಿ ಶಿಕ್ಷಣದಲ್ಲಿ ತುಳು: ಬೆಳವಣಿಗೆ ಮತ್ತು ಸವಾಲು: ನಾಳೆ ವಿಚಾರ ಸಂಕಿರಣ
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಪರಿಷತ್ ಹಾಗೂ ಡಾ. ಪಿ. ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ‘ಪದವಿ ಶಿಕ್ಷಣದಲ್ಲಿ ತುಳು ಪಠ್ಯ: ಬೆಳವಣಿಗೆ ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ಮಾ.12 ರಂದು ಬೆಳಗ್ಗೆ 10 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ವಹಿಸುವರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಉದ್ಘಾಟಿಸುವರು. ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಗೌರವ ಉಪಸ್ಥಿತರಿರುವರು.
ಗೋಷ್ಠಿಯ ಅಧ್ಯಕ್ಷತೆಯನ್ನು ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹಾಗೂ ಮಂಗಳೂರು ವಿ.ವಿ. ತುಳು ಪರೀಕ್ಷಾ ಮಂಡಳಿಯ ಅಧ್ಯಕ್ಷ ಡಾ.ಪ್ರಕಾಶ್ ಚಂದ್ರ ಶಿಶಿಲ ಅವರು ವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಸಂತ ಅಲೋಶಿಯಸ್ ಪರಿಗಣಿತ ವಿ.ವಿ.ಪ್ರಾಧ್ಯಾಪಕ ಹಾಗೂ ಜಾನಪದ ತಜ್ಞ ಡಾ. ವಿಶ್ವನಾಥ ಬದಿಕಾನ ಹಾಗೂ ಉಪನ್ಯಾಸಕಿ ಮತ್ತು ಲೇಖಕಿ ಮಣಿ ಎಂ. ರೈ ಅವರು ವಿಚಾರ ಮಂಡಿಸುವರು. ಪದವಿ ತರಗತಿಯ ತುಳು ವಿದ್ಯಾರ್ಥಿಗಳಾದ ಸುಜೇತ್ ಮತ್ತ್ ಚರಿತ್ ತಮ್ಮ ಅಭಿಪ್ರಾಯ ಮಂಡಿಸುವರು ಎಂದು ಪ್ರಕಟಣೆ ತಿಳಿಸಿದೆ.