ಅಪ್ರಾಪ್ತ ದಲಿತ ಹೆಣ್ಣು ಮಗಳ ಲೈಂಗಿಕ ದೌರ್ಜನ್ಯ: ಆರೋಪಿ ಮಹೇಶ್ ಭಟ್ ಬಂಧನಕ್ಕೆ ಒತ್ತಾಯ

ಅಪ್ರಾಪ್ತ ದಲಿತ ಹೆಣ್ಣು ಮಗಳ ಲೈಂಗಿಕ ದೌರ್ಜನ್ಯ: ಆರೋಪಿ ಮಹೇಶ್ ಭಟ್ ಬಂಧನಕ್ಕೆ ಒತ್ತಾಯ


ಮಂಗಳೂರು: ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಪ್ರಬಲ ಸಾಮಾಜಿಕ, ರಾಜಕೀಯ ಹಿನ್ನಲೆಯ ಮಹೇಶ್ ಭಟ್ ಎಂಬಾತ ಲೈಂಗಿಕ ಕಿರುಕುಳ, ಜಾತಿ ನಿಂದನೆ ಎಸಗಿರುವ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಜಾತಿ ನಿಂಧನೆ ಹಾಗೂ ಅಪ್ರಾಪ್ತ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ಪೋಕ್ಸೋ ಸೆಕ್ಷನಡಿಯಲ್ಲಿ ಕೇಸು ದಾಖಲಾಗಿದೆ. 

ಆದರೆ ಈ ಲೈಂಗಿಕ ದೌರ್ಜನ್ಯ ಪ್ರಕರಣವು ಸ್ಥಳೀಯವಾಗಿ ಹಲವು ಅನುಮಾನಗಳಿಗೆ ಎಡೆಮಾಡಿದ್ದು, ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಊಹಾಪೋಹಗಳು ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು, ಆರೋಪಿ ಮಹೇಶ್ ಭಟ್‌ನನ್ನು ಯಾವ ಒತ್ತಡಕ್ಕೂ ಮಣಿಯದೆ ತಕ್ಷಣ ಬಂಧಿಸಬೇಕು ಎಂದು ಡಿವೈಎಫ್‌ಐ, ಡಿಎಚ್‌ಎಸ್, ಜೆಎಮ್‌ಎಸ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಎಸ್‌ಎಫ್‌ಐ ದ.ಕ. ಜಿಲ್ಲಾ ಸಮಿತಿಗಳು ಆಗ್ರಹಿಸಿವೆ.

ಜನವರಿ 12, 2025ರಂದು ರಾಜಕೀಯವಾಗಿ ಗುರುತಿಸಿಕೊಂಡಿರುವ, ಭೂಮಾಲಕ ಮಹೇಶ್ ಭಟ್ ಎಂಬಾತನು ತನ್ನ ತೋಟದ ದಲಿತ ಕೂಲಿ ಕಾರ್ಮಿಕನ ಮಗಳು ಎಸ್‌ಎಸ್‌ಎಲ್‌ಸಿ ಓದುತ್ತಿರುವ 16 ವರ್ಷದ ಬಾಲಕಿಗೆ ಆಮಿಷ ಒಡ್ಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಈ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ಬೆದರಿಕೆಯನ್ನು ಒಡ್ಡಿರುತ್ತಾನೆ. ಕಳೆದ ಎರಡು ತಿಂಗಳಿನಿಂದ ಬಾಲಕಿ ಶಾಲೆಗೆ ಹೋಗದಿರುವುದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಹಾಜರಾಗದಿರುವುದರಿಂದ ಈ ಕುರಿತು ವಿಚಾರಿಸಲು ಶಾಲೆಯ ಶಿಕ್ಷಕರು ಆಕೆಯ ಮನೆಗೆ ತೆರಳಿದ್ದ ವೇಳೆ ‘ಬಾಲಕಿಗೆ ಆರೋಗ್ಯ ಸರಿಯಿಲ್ಲ’ ಎಂದು ಹೇಳಿ ಆಕೆಯ ಪೋಷಕರು ಶಿಕ್ಷಕರಿಗೆ ಆಕೆಯನ್ನು ಮಾತನಾಡಿಸಲು ಬಿಟ್ಟಿರಲಿಲ್ಲ ಎನ್ನಲಾಗಿದೆ. ಈ ವರ್ತನೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಮಾತ್ರವಲ್ಲದೆ ಅತ್ಯಾಚಾರವೂ ನಡೆದಿರುವ ಸಾಧ್ಯತೆಗಳಿವೆ ಎಂಬ ಬಲವಾದ ಅನುಮಾನ ಸ್ಥಳೀಯ ಸಾರ್ವಜನಿಕರ ನಡುವೆ ವ್ಯಕ್ತವಾಗುತ್ತಿದೆ. ಮಹೇಶ್ ಭಟ್‌ನಿಂದ ದೌರ್ಜನ್ಯಕ್ಕೊಳಗಾಗಿ ಬಾಲಕಿ ಅಸ್ವಸ್ಥ ಗೊಂಡಿರುವುದು, ಚಿಕಿತ್ಸೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿರುವುದು ನಾಗರಿಕರ  ಅನುಮಾನಗಳನ್ನು ಬಲಗೊಳಿಸುತ್ತದೆ. ಸಾಮಾಜಿಕ ಹಾಗೂ ರಾಜಕೀಯವಾಗಿ ಪ್ರಬಲನಾಗಿರುವ ಆರೋಪಿ ಮಹೇಶ್ ಭಟ್‌ನ ಬೆದರಿಕೆಗೆ ಅಂಜಿ ಹೆತ್ತವರು ಸತ್ಯವನ್ನು ಮುಚ್ಚಿಡುವ ಸಾಧ್ಯತೆಗಳು ಹೆಚ್ಚಾಗಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆಗೊಳಪಡಿಸುವ ಅವಶ್ಯಕತೆ ಇದೆ.

‘ನೀನು ನನ್ನ ಜೊತೆ ಗುಡ್ಡಕ್ಕೆ ಬರ್ತೀಯಾ’ ಎಂದಷ್ಟೇ ಆರೋಪಿ ಸಂತ್ರಸ್ತೆಯನ್ನು ಕೇಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ಸತ್ಯಕ್ಕೆ ದೂರವಾಗಿದ್ದು, ಇಷ್ಟೆ ಸಂಭವಿಸಿದ್ದಲ್ಲಿ ಸಂತ್ರಸ್ತೆ ಬಾಲಕಿ ಶಾಲೆಗೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಗೈರು ಹಾಜರಾಗುವ ಅವಶ್ಯಕತೆ ಬರುತ್ತಿರಲಿಲ್ಲ. ಈ ಎಲ್ಲಾ  ಅಂಶಗಳನ್ನು ಗಮನಿಸುವಾಗ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಕುರಿತು ಅನುಮಾನಗಳು ಬಲವಾಗುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆ ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು, ಬಾಲಕಿಯ ಮೇಲೆ ನಡೆದಿರುವ ದೌರ್ಜನ್ಯದ ಎಲ್ಲಾ ಅಂಶಗಳನ್ನು ಬಯಲಿಗೆ ತರಬೇಕು ಹಾಗೂ ತಪ್ಪಿತಸ್ಥ ಆರೋಪಿಯನ್ನು ಯಾವ ಪ್ರಭಾವನ್ನೂ ಒಳಗಾಗದೆ ತಕ್ಷಣ ಬಂಧಿಸಬೇಕು, ಕಾನೂನಾತ್ಮಕವಾಗಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಸಮಿತಿಗಳು ಮನವಿಯಲ್ಲಿ ಒತ್ತಾಯಿಸಿವೆ.

ನಿಯೋಗದಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಕೊಣಾಜೆ, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಾರತೀ ಬೋಳಾರ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಶ್ಮೀ ವಾಮಂಜೂರು, ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್‌ಎಫ್‌ಐನ ಜಿಲ್ಲಾ ಅಧ್ಯಕ್ಷ ವಿನುಶ ರಮಣ, ಡಿಎಚ್‌ಎಸ್‌ನ ಜಿಲ್ಲಾ ಕೋಶಾಧಿಕಾರಿ ರಾಧಕೃಷ್ಣ ಬೊಂಡಂತಿಲ, ಸಂತ್ರಸ್ತ ಬಾಲಕಿಯ ತಂದೆ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಮಾದುರಿ ಬೋಳಾರ, ಸುನಿತಾ ತಣ್ಣೀರುಬಾವಿ, ಚಂದ್ರ ಶೇಖರ ಕಿನ್ಯಾ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article