
ಕೆರೆ ಹತ್ತಿರ ಏನಕ್ಕೆ ಅಗೆಯುತ್ತಿದ್ರಿ ಸರ್?: ‘ಮನೆ ಬಳಿ ಕೆರೆ ಹತ್ತಿರ ಯಾಕಾಗಿ ಅಗೆಯುತ್ತಿದ್ದಿರಿ ಸಾರ್?’
Sunday, March 9, 2025
ಮಂಗಳೂರು: ಹೀಗೆಂದು ಪತ್ತೆಯಾದ ಬಳಿಕ ಪೊಲೀಸರನ್ನು ದಿಗಂತ್ ಪ್ರಶ್ನಿಸಿದ ಪರಿ. ನಂದಿಬೆಟ್ಟ ರೆಸಾರ್ಟ್‌ನಲ್ಲಿ ಮೂರು ದಿನ ದುಡಿದು 3 ಸಾವಿರ ರೂ. ಸಂಪಾದಿಸಿದ್ದ ದಿಗಂತ್ ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನಲ್ಲಿ ಉಡುಪಿಗೆ ಹತ್ತಿದ್ದ. ಶನಿವಾರ ಬೆಳಗ್ಗೆ ಫರಂಗಿಪೇಟೆಯಲ್ಲಿ ರೈಲಿನಲ್ಲಿ ಹೋಗುತ್ತಿದ್ದಾಗ ಪೊಲೀಸರು ಆತನ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿರುವುದನ್ನು ನೋಡಿದ್ದ. ರೈಲಿನ ಕಿಟಕಿ ಬಳಿ ನಿಂತು ತನ್ನ ಮನೆಯನ್ನು ಗಮನಿಸಿದ್ದ. ರೈಲಿನ ಟ್ರ್ಯಾಕ್ ಸುತ್ತಮುತ್ತ ಡ್ರೋಣ್ ಹಾರಾಟ, ಪೊಲೀಸರ ಕೂಂಬಿಂಗ್ ನೋಡಿದ್ದ. ಈ ವೇಳೆ ಪೊಲೀಸರು ಮನೆ ಬಳಿಯ ಕೆರೆಯಲ್ಲೂ ಈತನ ಪತ್ತೆಗೆ ಹುಡುಕಾಟ ನಡೆಸುತ್ತಿದ್ದರು. ಇದನ್ನು ರೈಲಿನಿಂದಲೇ ನೋಡಿದ ದಿಗಂತ್, ಕೆರೆ ಬಳಿ ಏನು ಹುಡುಕುತ್ತಾ ಇದ್ದೀರಿ ಎಂದು ಪ್ರಶ್ನಿಸಿದ್ದಾನೆ. ಕೆರೆಯ ಬಳಿಯ ಮೋರಿಯಲ್ಲಿ ಕೆಸರು ತೆರವುಗೊಳಿಸಲು ಅಗೆಯುತ್ತಿದ್ದರು. ಅದನ್ನು ಕೂಡ ದಿಗಂತ್ ಪ್ರಶ್ನಿಸಿದ್ದಾನೆ.
ಮನೆಯಿಂದ ಹೊರಟು ರೈಲು ಕಂಬಿಯಲ್ಲಿ ಸಾಗುತ್ತಿದ್ದಾಗ ಆತನ ಪಾದದಲ್ಲಿ ಗಾಯ ಉಂಟಾಗಿತ್ತು. ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿತ್ತು. ಹಾಗಾಗಿ ಚಪ್ಪಲಿಯನ್ನು ಅಲ್ಲೇ ಬಿಟ್ಟೆ ಎಂದು ಪೊಲೀಸರಲ್ಲಿ ತಿಳಿಸಿದ್ದಾನೆ.
ನಾಪತ್ತೆಯಾದ ಈ 11 ದಿನಗಳಲ್ಲಿ ಆತ ಯಾರನ್ನೂ ಸಂಪರ್ಕಿಸಿಲ್ಲ. ಗೊತ್ತುಗುರಿ ಇಲ್ಲದೆ ಹೋಗುತ್ತಿದ್ದ. ಕಲಿಕೆಯಲ್ಲಿ ದಿಗಂತ್ ಹುಷಾರಿದ್ದ. ಆದರೆ ಪರೀಕ್ಷೆ ಕಾರಣಕ್ಕೆ ಕೆಲವು ದಿನಗಳಿಂದ ಚಿಂತಾಕ್ರಾಂತನಾಗಿದ್ದ. ಅದೇ ಕಾರಣದಲ್ಲಿ ಆತ ಮನೆಯಿಂದ ಹೊರಗೆ ಹೋಗಿದ್ದಾನೆ.
ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್, ಇನ್‌ಸ್ಪೆಕ್ಟರ್ ಶಿವಕುಮಾರ್ ಉಪಸ್ಥಿತರಿದ್ದರು.