ಪರೀಕ್ಷೆ ಭೀತಿಯಿಂದ ತಲೆಮರೆಸಿಕೊಂಡಿದ್ದ ದಿಗಂತ್: ಎಸ್ಪಿ ಯತೀಶ್

ಪರೀಕ್ಷೆ ಭೀತಿಯಿಂದ ತಲೆಮರೆಸಿಕೊಂಡಿದ್ದ ದಿಗಂತ್: ಎಸ್ಪಿ ಯತೀಶ್


ಮಂಗಳೂರು: ಹಲವು ಅನುಮಾನಗಳಿಗೆ ಕಾರಣವಾಗಿ ನಾಪತ್ತೆಯಾಗಿ ಈಗ ಪತ್ತೆಯಾಗಿರುವ ಫರಂಗಿಪೇಟೆ ನಿವಾಸಿ ದಿಗಂತ್, ಪರೀಕ್ಷೆ ಭೀತಿಯಿಂದ ತಲೆಮರೆಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಫೆ.25ರಂದು ಮನೆಯಿಂದ ನಾಪತ್ತೆಯಾದ ದಿಗಂತ್ 11 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆಯಾಗಿದ್ದ. ಬಳಿಕ ಆತನನ್ನು ಪೊಲೀಸರು ಮಂಗಳೂರಿಗೆ ಕರೆತಂದು  ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ನನ್ನನ್ನು ಯಾರೋ ಅಪಹರಿಸಿದ್ದಾರೆ ಎಂದು ಹೇಳಿದ್ದ ದಿಗಂತ್, ಬಳಿಕ ಪೊಲೀಸ್ ವಿಚಾರಣೆಯಲ್ಲಿ ದ್ವಿತೀಯ ಪಿಯು ಪರೀಕ್ಷೆ ಸ ಮೀಪಿಸಿದ್ದು, ಒತ್ತಡಕ್ಕೆ ಒಳಗಾಗಿ ಪರೀಕ್ಷೆ ಭೀತಿಯಿಂದ ನಾಪತ್ತೆಯಾಗಿರುವುದಾಗಿ ಸ್ಪಷ್ಟಪಡಿಸಿದ್ದಾನೆ ಎಂದು ದ.ಕ. ಜಿಲ್ಲಾ ಎಸ್ಪಿ ಯತೀಶ್ ಭಾನುವಾರ ಮಂಗಳೂರಿನ  ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ತೆಯಾಗಿರುವ ದಿಗಂತ್‌ನನ್ನು ಪ್ರಾಥಮಿಕ ವಿಚಾರಣೆ ನಡೆಸಿ ಸಿಡಬ್ಲ್ಯೂಸಿ(ಮಕ್ಕಳ ಕಲ್ಯಾಣ ಸಮಿತಿ) ಮುಂದೆ ಹಾಜರುಪಡಿಸಿ ಬೊಂದೇಲ್‌ನ ಬಾಲಕರ ಮಂದಿರಕ್ಕೆ ಹಸ್ತಾಂತರಿಸಲಾಗಿದೆ. ಬಾಲಕನ ನಾಪತ್ತೆ ಬಗ್ಗೆ ಹೈಕೋರ್ಟ್‌ಗೆ ಆತನ ಹೆತ್ತವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವುದರಿಂದ ಆತನನ್ನು ಮಾ.೧೨ರಂದು  ಬೆಂಗಳೂರಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಳಿಕ ನ್ಯಾಯಾಲಯ ನಿರ್ದೇಶನದಂತೆ ಆತನ ಮನೆಗೆ ಅಥವಾ ಹಾಸ್ಟೆಲ್‌ಗೆ ಕಳುಹಿಸಲಾಗುವುದು. ಅಲ್ಲಿವರೆಗೆ  ಆತ ಬಾಲಮಂದಿರದಲ್ಲಿ ಇರಲಿದ್ದು, ಆತನಿಗೆ ತಜ್ಞರು ಕೌನ್ಸಿಲಿಂಗ್ ನಡೆಸಲಿದ್ದಾರೆ ಎಂದರು.

ಫೆ.25ರಂದು ಸಂಜೆ ದೇವಸ್ಥಾನಕ್ಕೆ ಹೋಗುವುದಾಗಿ ಕಿದೆಬೆಟ್ಟು ಮನೆಯಿಂದ ಹೊರಟ ದಿಗಂತ್, ಏಕಾಂಗಿಯಾಗಿ ನೇರವಾಗಿ ರೈಲ್ವೆ ಹಳಿಯಲ್ಲಿ ಮುನ್ನಡೆದಿದ್ದ.  ಅರ್ಕುಳದಲ್ಲಿ ಹಳಿಯಲ್ಲೇ ಮೊಬೈಲ್, ಬೂಟು, ವಾಚನ್ನು ಬಿಟ್ಟು ಮುಖ್ಯರಸ್ತೆಗೆ ಬಂದಿದ್ದ. ರಾತ್ರಿ ವೇಳೆ ಯಾವುದೇ ಬೈಕ್‌ನ್ನು ಏರಿ ಮಂಗಳೂರಿನ ಸ್ಟೇಟ್‌ಬ್ಯಾಂಕ್ ಬಸ್  ನಿಲ್ದಾಣ ತಲುಪಿದ್ದ. ಅಲ್ಲಿ ರಾತ್ರಿಯೇ ಖಾಸಗಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ತೆರಳಿದ್ದ.

ಮರುದಿನ ಶಿವಮೊಗ್ಗದಿಂದ ರೈಲಿನಲ್ಲಿ ಮೈಸೂರು ಮೂಲಕ ಕೆಂಗೇರಿಗೆ ಸಂಚರಿಸಿದ್ದ. ಅಷ್ಟರಲ್ಲಿ ಆತನ ಪಾಕೆಟ್‌ನಲ್ಲಿದ್ದ ಹಣ ಖಾಲಿಯಾಗಿತ್ತು. ಬೇರೆ ಹಣ ಇಲ್ಲದೆ ಆತ  ಅಲ್ಲಿ ರೈಲು ಇಳಿದು ನಂದಿಬೆಟ್ಟಕ್ಕೆ ಯಾರದೋ ಖಾಸಗಿ ಬೈಕ್‌ನಲ್ಲಿ ಡ್ರಾಪ್ ಪಡೆದಿದ್ದ. ಅಲ್ಲಲ್ಲಿ ಸ್ವಲ್ಪ ನಡೆದುಕೊಂಡು ಹೋಗಿದ್ದ. ನಂದಿಬೆಟ್ಟದಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಎರಡು ದಿನ ಕೆಲಸ ಮಾಡಿ ಸ್ವಲ್ಪ ಹಣ ಸಂಪಾದಿಸಿದ್ದ.

ನಂದಿಬೆಟ್ಟದಿಂದ ಮತ್ತೆ ಕೆಂಗೇರಿಗೆ ತೆರಳಿ ಅಲ್ಲಿಂದ ಕೈಯಲ್ಲಿರುವ ದುಡ್ಡಿನಲ್ಲಿ ಶುಕ್ರವಾರ ರಾತ್ರಿ ಮುರುಡೇಶ್ವರ ರೈಲು ಏರಿದ್ದ. ಈ ರೈಲಿನಲ್ಲಿ ಶನಿವಾರ ಬೆಳಗ್ಗೆ ಉಡುಪಿ ತಲುಪಿದ್ದ. ಆಗ ಆತ ದುಡಿದಿದ್ದ ಹಣ ಖರ್ಚಾಗಿದ್ದು, ಊಟ ಹಾಗೂ ಬಟ್ಟೆ ಖರೀದಿಗೆ ಮಧ್ಯಾಹ್ನ ಉಡುಪಿ ಡಿಮಾರ್ಟ್‌ಗೆ ಬಂದಿದ್ದ. ಅಲ್ಲಿ ಖರೀದಿಗೆ ಯತ್ನಿಸಿ ದುಡ್ಡಿಲ್ಲದೆ ವಾಪಸ್ ಹೋಗಲು ಯತ್ನಿಸಿದಾಗ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಉಡುಪಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು  ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

500 ರೂ.ನಲ್ಲಿ ಸುತ್ತಾಟ:

ಮನೆಯಿಂದ 500 ರೂ. ತೆಗೆದುಕೊಂಡು ಹೊರಟ ದಿಗಂತ್ ಅರ್ಕುಳದಲ್ಲಿ ಬೈಕ್‌ನಲ್ಲಿ ಡ್ರಾಪ್ ತೆಗೆದುಕೊಂಡು ಮಂಗಳೂರು ತಲುಪಿ, ಖಾಸಗಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ಟಿಕೆಟ್ ಮಾಡಿ ಪ್ರಯಾಣಿಸಿದ್ದ. ಶಿವಮೊಗ್ಗದಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸಿ, ಮೈಸೂರಿನಿಂದ ಕೆಂಗೇರಿಗೆ ಕೈಯಲ್ಲಿ ಹಣ ಇಲ್ಲದೆ ಟಿಕೆಟ್ ರಹಿತ ಪ್ರಯಾಣಿಸಿದ್ದ. ಬಳಿಕ ನಂದಿಬೆಟ್ಟದಲ್ಲಿ ರೆಸಾರ್ಟ್‌ನಲ್ಲಿ ದುಡಿದು ಚಿಕ್ಕಾಸು ಸಂಪಾದಿಸಿ ಮೈಸೂರಿನಲ್ಲಿ ಸುತ್ತಾಡಿ ಉಡುಪಿ ರೈಲು ಹತ್ತಿದ್ದ. ಉಡುಪಿಯಲ್ಲಿ ಕೈಯಲ್ಲಿದ್ದ ಕಾಸು ಖಾಲಿ ಯಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article