
ಶಕ್ತಿ ವಸತಿ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ: ನಾರಿ ಶಕ್ತಿ ವಾಕತಾನ್
Sunday, March 9, 2025
ಮಂಗಳೂರು: ಮಂಗಳೂರಿನ ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಮಾ.8 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ನಾರಿ ಶಕ್ತಿ ವಾಕತಾನ್ ಮೂಲಕ ಆಚರಿಸಲಾಯಿತು.
ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಎಲ್ಲಾ ಮಹಿಳಾ ಸಿಬ್ಬಂದಿಗಳು ಶಕ್ತಿ ವಸತಿ ಶಾಲೆಯಿಂದ ಶಕ್ತಿನಗರ ಜಂಕ್ಷನ್ ವರೆಗೆ ಕಾಲ್ನಡಿಗೆಯ ಜಾಥಾವನ್ನು ಕೈಗೊಂಡಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಪ್ರಸವ ಮತ್ತು ಸ್ತ್ರೀರೋಗ ತಜ್ಞೆ ಡಾ. ಪೂಜಿತ ಮೂರ್ತಿ ಅವರು ಮಹಿಳೆಯರ ಆರೋಗ್ಯ, ಆಧ್ಯಾತ್ಮಿಕ, ಮತ್ತು ಮಾನಸಿಕ ಕಲ್ಯಾಣದ ಪ್ರಾಮುಖ್ಯತೆ ಬಗ್ಗೆ ಮಾತನಾಡಿ, ಮಹಿಳೆಯ ಮಾನಸಿಕ ಆರೋಗ್ಯವು ಆಕೆಯ ಸ್ಥೈರ್ಯಕ್ಕೆ, ದೈಹಿಕ ಆರೋಗ್ಯಕ್ಕೆ ಮತ್ತು ಸಮಾಜಕ್ಕೆ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಮಹಿಳೆಯು ನಿರಂತರವಾಗಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲಿ ನಿರತಳಾಗಿದ್ದರೂ ಆಕೆ ತನಗೋಸ್ಕರ ಕಿಂಚಿತ್ತು ಸಮಯವನ್ನು ಮೀಸಲಿಡಬೇಕು. ತನ್ನ ಆರೋಗ್ಯದ ಕಡೆಗೂ ಆಕೆ ಗಮನ ಹರಿಸಬೇಕು ಎಂದು ಹೇಳುತ್ತಾ ಒಂದು ಹೆಣ್ಣಿನ ಆರೋಗ್ಯ ಮತ್ತು ಮಾನಸಿಕ ಕಲ್ಯಾಣದ ಬಗ್ಗೆ ಇಂದು ನಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಂದು ಮಹಿಳೆ ಇರುತ್ತಾಳೆ, ಹಾಗೇಯೇ ಒಬ್ಬ ಮಹಿಳೆಯ ಎಲ್ಲಾ ಬೇಕು ಬೇಡಗಳಲ್ಲಿ ಪುರುಷನ ಸಹಕಾರ ಬೇಕು. ಹಾಗಿದ್ದಾಗ ಮಾತ್ರ ಆ ಮಹಿಳೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಲು ಸಾಧ್ಯ ಎಂದು ಹೇಳಿದರು.
ಶಕ್ತಿ ವಸತಿಯ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು, ಹಾಗೂ ಎಲ್ಲಾ ಸಿಬ್ಬಂದಿಗಳು ಈ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿದರು. ಶಕ್ತಿ ವಸತಿ ಶಾಲೆಯ ಶಿಕ್ಷಕಿ ಪ್ರೇಮಲತಾ ನಿರೂಪಿಸಿ, ಕಾರ್ಯಕ್ರಮವನ್ನು ವಂದಿಸಿದರು.