
ಕ್ರೀಡೆಯು ನಮಗೆ ಶಿಸ್ತನ್ನು ಕಲಿಸುವುದರೊಂದಿಗೆ ಸಾಧನೆಗೆ ಪೂರಕವಾಗಿದೆ: ಡಾ. ಸುಧಾಕರನ್ ಟಿ.
ಮಂಗಳೂರು: ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಉತ್ತಮ ಶಿಸ್ತನ್ನು ಕಲಿಯಬಹುದು ಹಾಗೂ ಅದು ಜೀವನದಲ್ಲಿ ಉತ್ತಮ ಸಾಧನೆಗೆ ಸಹಕಾರಿಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಸುಧಾಕರನ್ ಟಿ. ಹೇಳಿದರು.
ಅವರು ಮಾ.21 ರಂದು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ನಡೆದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಸೋಲು ಗೆಲುವಿನ ಸೋಪಾನ. ಕಠಿಣ ಪರಿಶ್ರಮ ಹಾಗೂ ದಿನನಿತ್ಯದ ತರಬೇತಿಯಿಂದ ಮಾತ್ರ ಗೆಲುವು ನಮಗೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಮಾತನಾಡಿ, ಒಗ್ಗಟ್ಟು ಶಕ್ತಿಯ ಸಂಕೇತ, ಎಲ್ಲರೂ ಒಗ್ಗಟ್ಟಿನಿಂದ ಕ್ರೀಡೆಯಲ್ಲಿ ಭಾಗವಹಿಸಲು ಅವರು ಸಲಹೆ ನೀಡಿದರು.
ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ದುಗ್ಗಪ್ಪ ಕಜೆಕಾರ್, ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಐಕ್ಯೂಎಸಿ ಸಹಸಂಯೋಜಕಿ ಡಾ. ಜ್ಯೋತಿಪ್ರಿಯ, ದೈಹಿಕ ಶಿಕ್ಷಣ ನಿರ್ದೇಶಕರಾದ ಶುಭಾ ಕೆ.ಹೆಚ್., ಮತ್ತು ಡಾ. ಅಪರ್ಣ ಆಳ್ವ ಹಾಗೂ ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳು, ಹಿರಿಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉಪಸ್ಥಿತರಿದ್ದರು.
ಕ್ರೀಡಾ ಪ್ರತಿಜ್ಞೆಯನ್ನು ಗಗನ್ ಸುವರ್ಣ ಓದಿದರು. ಸಾಕ್ಷಿ ವಂದಿಸಿದರು. ಶಶಾಂಕ್ ನಿರೂಪಿಸಿದರು. ಕ್ರೀಡಾಕೂಟದಲ್ಲಿ ಕಾರ್ತಿಕ್ ಕೆ, ಸುದೀಪ್ ರಾಜ್ ಮಾಡೂರ್, ಪ್ರವೀಣ್ ಬಿ.ಎಂ. ನಿರ್ಣಾಯಕರಾಗಿ ಸಹಕರಿಸಿದರು.