
ಡಾ. ಸಿದ್ಧರಾಜು ಅವರಿಗೆ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ಶ್ರೇಷ್ಠ ಸಂಶೋಧನಾ ಪ್ರಸ್ತುತಿ ಪ್ರಶಸ್ತಿ
Thursday, March 27, 2025
ಮಂಗಳೂರು: ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಮಾರ್ಚ್ 24 ರಿಂದ 26ರವರೆಗೆ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಎಕ್ಸ್ಟ್ರಿಮೋಫೈಲ್ಸ್ ವಿಜ್ಞಾನ ಸಮ್ಮೇಳನದಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ಧರಾಜ ಅವರಿಗೆ ಶ್ರೇಷ್ಠ ಸಂಶೋಧನಾ ಪ್ರಸ್ತುತಿ ಪ್ರಶಸ್ತಿ ಲಭಿಸಿದೆ.
ಈ ಸಮ್ಮೇಳನಕ್ಕೆ ಅಮೆರಿಕಾ, ಸ್ಪೇನ್, ಬ್ರೆಜಿಲ್, ಈಕ್ವೆಡಾರ್, ಸೌದಿ ಅರೇಬಿಯಾ ಸೇರಿದಂತೆ 13 ದೇಶಗಳಿಂದ ವಿವಿಧ ಕ್ಷೇತ್ರಗಳಲ್ಲಿ ಒಟ್ಟು 33ಕ್ಕೂ ಹೆಚ್ಚು ವಿಜ್ಞಾನಿಗಳು ಭಾಗವಹಿಸಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಅಲ್ಲದೇ, ಸಂಶೋಧನಾ ವಿಜ್ಞಾನಿಗಳ ವಿಭಾಗದಲ್ಲಿ ಡಾ. ಸಿದ್ದರಾಜು ಪ್ರಥಮ ಪ್ರಶಸ್ತಿ ಪಡೆದರೆ, ಅವರ ಪಿಹೆಚ್.ಡಿ ವಿದ್ಯಾರ್ಥಿನಿ ಪರಮಶ್ರೀ ದೀಪಾ ಅವರಿಗೆ ವಿದ್ಯಾರ್ಥಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಲಭಿಸಿದೆ.
ಕಳೆದ ಒಂದು ದಶಕದಿಂದ ಸಸ್ಯಶಾಸ್ತ್ರ ವಿಷಯವನ್ನು ಬೋಧಿಸುತ್ತಿರುವ ಡಾ. ಸಿದ್ಧರಾಜು ಅವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ಸೇರುವ ಮುನ್ನಾ ಅಮೆರಿಕಾದ ಮೆರಿಲ್ಯಾಂಡ್ ಯೂನಿವರ್ಸಿಟಿಯಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.