ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ಮಸೂದೆಯನ್ನು ಕೂಡಲೆ ಹಿಂಪಡೆಯಬೇಕು: ಹೋರಾಟದ ಎಚ್ಚರಿಕೆ

ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ಮಸೂದೆಯನ್ನು ಕೂಡಲೆ ಹಿಂಪಡೆಯಬೇಕು: ಹೋರಾಟದ ಎಚ್ಚರಿಕೆ

ಮಂಗಳೂರು: ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ಮಸೂದೆಯನ್ನು ಕೂಡಲೆ ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಜಿಲ್ಲೆಯ ಮುಸ್ಲಿಂ ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಪ್ರಮುಖ ಖಾಜಿಗಳಾದ ಅಹ್ಮದ್ ಮುಸ್ಲಿಯಾರ್ ತಾಖಾ ಉಸ್ತಾದ್, ಝೈನುಲ್ ಉಲಮಾ ಮಾಣಿ ಉಸ್ತಾದ್ ಹಾಗೂ ವಿವಿಧ ಉಲಮಾಗಳ ಸಮ್ಮುಖದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ. ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಖಾಜಿಗಳ ನೇತೃತ್ವದಲ್ಲಿ ಇನ್ನೆರಡು ದಿನಗಳಲ್ಲಿ ಹೋರಾಟದ ರೂಪುರೇಷೆ ತಯಾರಿಸಲಾಗುವುದು. ಉನ್ನತ ಮಟ್ಟದ ಕಾನೂನು ಹೋರಾಟವೂ ಸೇರಿದಂತೆ ವಿವಿಧ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ವಕ್ಫ್ ಕಾಯ್ದೆಗೆ ಇದುವರೆಗೆ 40 ತಿದ್ದುಪಡಿಗಳು ಆಗಿವೆ. ಈಗ 14 ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಉತ್ತಮ ತಿದ್ದುಪಡಿಯಾಗಿದ್ದರೆ ನಮ್ಮ ವಿರೋಧ ಇಲ್ಲ. ಆದರೆ ಈಗಿನ ಪ್ರಸ್ತಾಪಿತ ತಿದ್ದುಪಡಿಯ ಮೂಲಕ ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಳ್ಳುವ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದರು.

ಮುಸ್ಲಿಮೇತರರ ಆಸ್ತಿ ಇಲ್ಲ:

ವಕ್ಫ್ ಆಸ್ತಿಯಲ್ಲಿ ಒಂದಿಂಚೂ ಮುಸ್ಲಿಮೇತರರ ಆಸ್ತಿ ಇಲ್ಲ. ಸರ್ಕಾರವು ಮುಸ್ಲಿಮರಿಗೆ ನೀಡಿದ ಭೂಮಿಯೂ ಅಲ್ಲ. ನೂರಾರು ವರ್ಷಗಳಿಂದ ಮುಸ್ಲಿಮ್ ಶ್ರೀಮಂತರು ಸ್ವಇಚ್ಛೆಯಿಂದ ದಾನ ಮಾಡಿ ಧಾರ್ಮಿಕ ಕಾರ್ಯಗಳಿಗೆ ಉಪಯೋಗಿಸಲು ಬಿಟ್ಟುಕೊಟ್ಟ ಭೂಮಿ ಇದು. ಹೀಗೆ ದೇಶದಲ್ಲಿ 9.50 ಲಕ್ಷ ಎಕರೆ ಭೂಮಿ ವಕ್ಫ್ ಆಸ್ತಿಯಾಗಿ ನೋಂದಣಿಯಾಗಿದೆ. ಈಗ ತಿದ್ದುಪಡಿ ಮೂಲಕ ಮುಸ್ಲಿಮರ ಹಕ್ಕನ್ನು ದಮನಿಸುವ ರಾಜಕೀಯ ಪ್ರಯತ್ನ ನಡೆಸಲಾಗಿದೆ ಎಂದು ಲಕ್ಕಿಸ್ಟಾರ್ ಹೇಳಿದರು.

ವಿರೋಧ ಏಕೆ?:

ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎನ್‌ಕೆಎಂ ಶಾಫ್ ಸಅದಿ ಮಾತನಾಡಿ, ನೂತನ ತಿದ್ದುಪಡಿ ಪ್ರಕಾರ ಇನ್ನು ಮುಂದೆ 6 ತಿಂಗಳೊಳಗೆ ಕಾಗದ ಪತ್ರ ತೋರಿಸಿ ದಾಖಲಾಗದ ಯಾವುದೇ ವಕ್ಫ್ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ. ವಕ್ಫ್ ಆಸ್ತಿಯನ್ನು ವಕ್ಫ್ ಅಲ್ಲ ಎಂದು ತೀರ್ಮಾನಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡಲಾಗಿದೆ. ವಕ್ಫ್ ಟ್ರಿಬ್ಯೂನಲ್‌ಗೆ ನೇಮಕವಾಗುವ ಸರ್ಕಾರಿ ಅಧಿಕಾರಿ ಮುಸ್ಲಿಮನಾಗಿರಬೇಕು ಎಂಬ ಷರತ್ತನ್ನೂ ಹೊಸ ಮಸೂದೆ ತೆಗೆದುಹಾಕಿದೆ. ಅಲ್ಲದೆ ವಕ್ಫ್ ಬೋರ್ಡ್‌ನಲ್ಲಿ ಕಡ್ಡಾಯವಾಗಿ ಇಬ್ಬರು ಮುಸ್ಲಿಮೇತರರನ್ನು ನೇಮಿಸಬೇಕೆಂದು ಬದಲಿಸಲಾಗಿದೆ. ಇತರ ಧರ್ಮಗಳಲ್ಲಿ ಇಲ್ಲದ ಈ ನಿಯಮ ಇಲ್ಲಿಗೆ ಮಾತ್ರ ಏಕೆ ಅನ್ವಯ ಮಾಡೋದು? ತಿದ್ದುಪಡಿ ವಿರುದ್ಧ ದಾಖಲಾದ 98 ಲಕ್ಷ ಲಿಖಿತ ಮನವಿಗಳಲ್ಲಿ ಬಹುತೇಕ ಇವುಗಳನ್ನು ವಿರೋಧಿಸಿದ್ದರೂ ಜಾರಿಗೊಳಿಸಲು ಮುಂದಾಗಿರುವುದು ಸರಿಯಲ್ಲ. ಮುಸ್ಲಿಮರ ಅಸ್ಮಿತೆಯನ್ನು ನಾಶಪಡಿಸುವ ಇಂತಹ ತಿದ್ದುಪಡಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು.

ಮುಖಂಡರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಉಸ್ಮಾನುಲ್ ಫೈಝಿ ತೋಡಾರು, ಯು.ಕೆ. ಮುಹಮ್ಮದ್ ಸಅದಿ ವಳವೂರು, ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ಣ, ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಅನೀಸ್ ಕೌಸರಿ, ಕೆ.ಎಂ. ಅಬೂಬಕರ್ ಸಿದ್ದೀಖ್ ಮೊಂಟುಗೋಳಿ, ಹುಸೈನ್ ದಾರಿಮಿ ರೆಂಜಲಾಡಿ, ಮುಹಮ್ಮದ್ ಮುಸ್ಲಿಯಾರ್ ಮುಂಡೋಲ, ಅಶ್ರಫ್ ಕಿನಾರ ಮಂಗಳೂರು ಮತ್ತಿತರರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article