ಮಾನವೀಯತೆಗೆ ತಲೆಬಾಗಿ ಮಾನವ ಧರ್ಮವನ್ನು ಉಳಿಸೋಣ: ಡಿಸಿಎಂ ಡಿ.ಕೆ. ಶಿವಕುಮಾರ್

ಮಾನವೀಯತೆಗೆ ತಲೆಬಾಗಿ ಮಾನವ ಧರ್ಮವನ್ನು ಉಳಿಸೋಣ: ಡಿಸಿಎಂ ಡಿ.ಕೆ. ಶಿವಕುಮಾರ್


ಉಡುಪಿ: ನಾವೆಲ್ಲರೂ ಮಾನವೀಯತೆಗೆ ತಲೆ ಬಾಗಲೇಬೇಕು, ಮಾನವ ಧರ್ಮ ಉಳಿಸಿಕೊಳ್ಳಬೇಕು. ಯಾರಿಗೂ ತೊಂದರೆ ಕೊಡದಂತೆ ನಮ್ಮ ಧರ್ಮದ ದಾರಿಯಲ್ಲಿ ನಾವು ಬದುಕಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಶಿಸಿದರು.

ಭಾನುವಾರ ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹೊಸಮಾರಿಗುಡಿ ದೇವಳದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾರಿಯಮ್ಮ ಎಲ್ಲರೂ ನೀಡುವ ಹಣ್ಣು, ಹೂವು ಜೊತೆಗೆ ಕೋಳಿಯನ್ನೂ ಅರ್ಪಿಸಿಕೊಳ್ಳುತ್ತಾಳೆ ಎಂದು ಪುರೋಹಿತರು ಹೇಳಿದರು. ಭಕ್ತರು ಭಕ್ತಿಯಿಂದ ನೀಡಿದ್ದನ್ನು ತಾಯಿ ಬೇಡ ಎನ್ನುವುದಿಲ್ಲ. ಭಕ್ತಿಗೆ ದೊಡ್ಡ ಶಕ್ತಿಯಿದೆ. ಇಲ್ಲಿ ಮಾನವತಾ ಧರ್ಮ ಮೆರೆಯುತ್ತಿದೆ ಎಂದರು.

ಸರ್ಕಾರದ ಸಹಾಯವಿಲ್ಲದೇ ಭಕ್ತರ ಸಣ್ಣ ಹಾಗೂ ದೊಡ್ಡ ನೆರವಿನಿಂದ ಅತ್ಯದ್ಭುತವಾಗಿ ಮಾರಿಗುಡಿ ನಿರ್ಮಿಸಲಾಗಿದೆ. ಇಂಥ ವೈಭವೋಪೇತವಾದ ದೇವಸ್ಥಾನವನ್ನು ನಾನು ಕರ್ನಾಟಕದಲ್ಲಿ ಎಲ್ಲಿಯೂ ನೋಡಿಲ್ಲ ಎಂದರು.

ನಮ್ಮ ಸಂಸ್ಕೃತಿಯಲ್ಲಿ ಸ್ತ್ರಿ ದೇವತೆಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಪ್ರತೀ ಊರಿಗೆ ಹೋದಾಗಲೂ ಮೊದಲು ಕೇಳುವುದು ಇಲ್ಲಿನ ಗ್ರಾಮದೇವತೆ ಯಾವುದು ಎಂದು. ಪ್ರತೀ ದೇವರ ಹೆಸರಿನ ಮುಂಭಾಗ ಪತ್ನಿಯರ ಹೆಸರನ್ನು ಸೇರಿಸಿ ಕರೆಯಲಾಗುತ್ತದೆ. ಉದಾಹರಣೆಗೆ ಲಕ್ಷ್ಮೀ ವೆಂಕಟೇಶ್ವರ, ಶಿವ ಪಾರ್ವತಿ ಎಂದು ಹೇಳುತ್ತೇವೆ. ನಾವು ಹುಟ್ಟಿದ ದೇಶವನ್ನು ಮಾತೃಭೂಮಿ ಎಂದರೆ, ಮಾತಾಡುವ ಭಾಷೆಯನ್ನು ಮಾತೃಭಾಷೆ ಎನ್ನುತ್ತಾರೆ ಎಂದು ತಿಳಿಸಿದರು.

ಎಲ್ಲಾ ಜಾತಿ, ಧರ್ಮ, ಪಂಥ, ಪಂಗಡಗಳ ಜನರನ್ನು ರಕ್ಷಣೆ ಮಾಡುವ ತಾಯಿ ಕಾಪುವಿನ ಮಾರಿಯಮ್ಮ ದೇವಿಯ ದರ್ಶನವನ್ನು ಪಡೆಯಲೇಬೇಕು ಎಂದು ನನ್ನ ಕುಟುಂಬ ಹಾಗೂ ಪತ್ನಿಯನ್ನು ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ಸೂಚಿಸುವೆ ಎಂದರು.

ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ. ಮನುಷ್ಯನಿಗೆ ಕಷ್ಟಗಳು ಬಂದಾಗ, ದುಃಖ ಉಂಟಾದಾಗ ದೂರ ಮಾಡುವವಳು ದುರ್ಗಾ ದೇವಿ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ಮಾರಿಯಮ್ಮ ದೇವಿಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಜೀವನದ ಪುಣ್ಯದ ಘಳಿಗೆ ಎಂದರು.

ಮನುಷ್ಯ ಹುಟ್ಟಿದ ಮೇಲೆ ಒಂದು ದಿನ ಸಾಯಲೇ ಬೇಕು. ನಮ್ಮ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಇದರ ನಡುವೆ ಏನನ್ನು ಸಾಧನೆ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎಂದು ಹೇಳಿದರು.

ದೇವರು ವರ, ಶಾಪ ಎರಡೂ ಕೊಡುವುದಿಲ್ಲ. ಆದರೆ, ಅವಕಾಶ ಕೊಡುತ್ತಾನೆ. ನಾನೂ ಸೇರಿದಂತೆ ಅನೇಕ ಭಕ್ತರಿಗೆ ದೇವಿಯ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ. ಭಕ್ತರ ನೆರವಿನಿಂದ ಇಡೀ ದೇವಸ್ಥಾನವನ್ನು ಸುಮಾರು 99 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿದು ಸಂತೋಷವಾಯಿತು ಎಂದರು.

ನಾನು ಈ ದೇವಸ್ಥಾನಕ್ಕೆ ಉಪಮುಖ್ಯಮಂತ್ರಿಯಾಗಿ ಬಂದಿಲ್ಲ. ದೇವಿಯ ಭಕ್ತವಾಗಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಸ್ನೇಹಿತರಾದ ಮುಂಬೈ, ದುಬೈ, ಬೆಂಗಳೂರು ಸೇರಿದಂತೆ ಹೊರ ಊರುಗಳಲ್ಲಿ ಇರುವ ಅನೇಕರು ದೇವಿಯ ಶಕ್ತಿಯ ಸೆಳೆತಕ್ಕೆ ಒಳಗಾಗಿ ಬಂದಿದ್ದೀರಿ. ಇದೇ ತಾಯಿಯ ಪವಾಡ ಎಂದರು.

ಇಡೀ ದೇವಸ್ಥಾನದ ಶಿಲ್ಪಕಲೆ ಚೆನ್ನಾಗಿ ಮೂಡಿಬಂದಿದೆ. ಕೆತ್ತನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಇಳಕಲ್ ಕೆಂಪು ಕಲ್ಲನ್ನು ಬಳಸಲಾಗಿದೆ. ನಾನಾ ಭಾಗದ ಜನರು ಕೈಜೋಡಿಸಿ ತಾಯಿಯ ಆಶೀರ್ವಾದಕ್ಕೆ ಭಾಜನರಾಗಿದ್ದಾರೆ. ದೇವಸ್ಥಾನ ಇನ್ನೂ ಬೆಳೆಯಲಿ ಎಂದು ಆಶಿಸುತ್ತೇನೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂಎಲ್‌ಸಿ ಡಾ.ಮಂಜುನಾಥ ಭಂಡಾರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್, ಕಾಂಗ್ರೆಸ್ ಮುಖಂಡ ಮಿಥುನ್ ರೈ ಮೊದಲಾದವರಿದ್ದರು.

ಕಾಪು ಭೇಟಿ ನನ್ನ ಸೌಭಾಗ್ಯ:

ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆಶಿ, ಎಲ್ಲರನ್ನೂ ಕಾಪಾಡುವ ಮಾರಮ್ಮನ ಪವಿತ್ರವಾದ ಕ್ಷೇತ್ರ ಕಾಪು. ಇಲ್ಲಿಗೆ ಬಂದಿರುವುದು ನನ್ನ ದೊಡ್ಡ ಭಾಗ್ಯ. ನಾನು ನೂರಾರು ದೇವಾಲಯ ನೋಡಿದ್ದೇನೆ. ಆದರೆ, ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವ ರೀತಿ ಬೇರೆ ಯಾವುದನ್ನೂ ನಾನು ನೋಡಿಲ್ಲ. ಶಿಲ್ಪಿಗಳು ಅದ್ಭುತವಾಗಿ ಕಲ್ಲು, ಮರದ ಕೆಲಸ ಮಾಡಿದ್ದಾರೆ. ಈ ದೇವಾಲಯ ಹಾಗೂ ಈ ದೇವಿಗೆ ಜಾತಿ ತಾರತಮ್ಯ ಇಲ್ಲ. ಮೇಲ್ಜಾತಿಯವರಿಂದ ಕೆಳ ಜಾತಿಯ ವರೆಗೂ ಎಲ್ಲರಿಗೂ ಇಲ್ಲಿ ಅವಕಾಶವಿದೆ. ಇಲ್ಲಿ ಮಾನವ ಜಾತಿ ಮಾತ್ರ ಇದೆ. ನಾನು ನಂಬಿರುವ ನಮ್ಮ ಗುರುಗಳು ನನಗೆ, ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ’ ಎಂದು ಮಾರ್ಗದರ್ಶನ ನೀಡಿದ್ದಾರೆ. ಈ ತತ್ವ ಈ ದೇವಾಲಯದಲ್ಲಿ ಎದ್ದು ಕಾಣುತ್ತಿದೆ ಎಂದರು.

ಚಿನ್ನದ ಕಲಶ ಸೇವೆ ಕಾಣಿಕೆ

ಈ ಸಂದರ್ಭದಲ್ಲಿ ದೇವಾಲಯದ ಬ್ರಹ್ಮಕಲಶೋತ್ಸವ ಚಿನ್ನದ ಕಲಶ ಸೇವೆಗಾಗಿ 9 ಲಕ್ಷ 99 ಸಾವಿರದ 999 ರೂ. ಕಾಣಿಕೆ ಸಮರ್ಪಿಸಿದರು. ಪತ್ನಿಯೊಂದಿಗೆ ಇನ್ನೊಮ್ಮೆ ಭೇಟಿ ನೀಡುವುದಾಗಿ ತಿಳಿಸಿದರು.

ನೀರಿಗೆ ಜಾತಿ, ಧರ್ಮ ಇದೆಯೇ ಎಂದು ಪ್ರಶ್ನಿಸಿದ ಡಿಕೆಶಿ, ಪವಿತ್ರ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ತೆರಳಿದ್ದೆ ಎಮದು ಕುಂಭಮೇಳ ಭೇಟಿಯನ್ನು ಸಮರ್ಥಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article