.jpeg)
ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಸ್ಥಿತಿ ನೋಡಿದರೆ ನಮಗೆ ಅಯ್ಯೋ ಪಾಪ ಎನಿಸುತ್ತದೆ: ಬಿ.ವೈ. ವಿಜಯೇಂದ್ರ
ಕಾಪು: ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಸ್ಥಿತಿ ನೋಡಿದರೆ ನಮಗೆ ಅಯ್ಯೋ ಪಾಪ ಎನಿಸುತ್ತದೆ. ಗ್ಯಾರೆಂಟಿಗಳಿಂದ ತಮ್ಮ ಕೈಗಳಿಗೆ ತಾವೇ ಕಟ್ಟಿಹಾಕಿಕೊಂಡಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಭಾನುವಾರ ಕಾಪು ಹೊಸ ಮಾರಿಗುಡಿ ದೇವಳ ಪುನಃಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಕಾರ‍್ಯಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸೋಮವಾರ (ನಾಳೆ)ದಿಂದ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಸಿದ್ದರಾಮಯ್ಯ 16ನೇ ಬಜೆಟ್ ಮಂಡಿಸಲಿದ್ದಾರೆ. ಯಡಿಯೂರಪ್ಪನವರ ಬಜೆಟ್‌ನಲ್ಲಿ ಎಲ್ಲ ಜಿಲ್ಲೆಗಳಿಗೂ ನಮಗೇನು ಸಿಗುತ್ತದೆ ಎಂಬ ಕಾತರ ಇತ್ತು. ತುಳುನಾಡಿಗೆ ಯಡಿಯೂರಪ್ಪ ವಿಶೇಷ ಅನುದಾನ ನೀಡುತ್ತಿದ್ದರು. ಈ ಸರ್ಕಾರದಲ್ಲಿ ಆ ಪರಿಸ್ಥಿತಿ ಇಲ್ಲ ಎಂದರು.
ನೀರಾವರಿ, ಲೋಕೋಪಯೋಗಿ ಇಲಾಖೆಯಲ್ಲಿ ಹಣವೇ ಇಲ್ಲ. ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಿಲ್ಲದ ಪರಿಸ್ಥಿತಿಗೆ ಬಂದು ನಿಂತಿದೆ. ಇದನ್ನು ಸ್ವತಃ ಇಂಧನ ಸಚಿವ ಜಾರ್ಜ್ ಒಪ್ಪಿಕೊಂಡಿದ್ದಾರೆ. ವಿವಿಧ ಇಲಾಖೆಗಳು 6 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಇದು ಸರ್ಕಾರದ ಆಡಳಿತ ವೈಖರಿಗೆ ಕೈಗಡಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರು.
ವಿವಾದಗಳಿಗೆ ಶೀಘ್ರ ಅಂತ್ಯ:
ಬಿಜೆಪಿ ರಾಜ್ಯಾಧ್ಯಕರ‍್ಷ ಆಯ್ಕೆ ಭಿನ್ನಮತ ವಿಚಾರ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಎಲ್ಲಾ ವಿವಾದಗಳಿಗೂ ಇತಿಶ್ರೀ ಹಾಕುವ ಕಾಲ ಕೂಡಿಬಂದಿದೆ. ಸದ್ಯದಲ್ಲೇ ರಾಜ್ಯದ ಅಧ್ಯಕ್ಷರು ಯಾರಾಗುತ್ತಾರೆ ಎನ್ನುವುದು ಗೊತ್ತಾಗುತ್ತದೆ. 12 ರಾಜ್ಯಗಳಿಗೆ ಮಾತ್ರ ಅಧ್ಯಕ್ಷರ ನೇಮಕಾತಿಯಾಗಿದೆ. ನಮ್ಮ ರಾಜ್ಯ ಒಳಗೊಂಡಂತೆ ಇತರ ರಾಜ್ಯಗಳ ರಾಜ್ಯಾಧ್ಯಕ್ಷರ ಆಯ್ಕೆ ಕೆಲವೇ ದಿನಗಳಲ್ಲಿ ಆಗಲಿದೆ. ನಮ್ಮ ರಾಜ್ಯದ ಸಮಸ್ಯೆ ವಿಶೇಷವಾಗಿದೆ. ಅಧ್ಯಕ್ಷರ ಘೋಷಣೆಯಾಗುತ್ತಿದ್ದಂತೆ ಎಲ್ಲ ಸಮಸ್ಯೆಗಳೂ ಬಗೆಹರಿಯಲಿದೆ ಎಮದು ವಿಶ್ವಾಸ ವ್ಯಕ್ತಪಡಿಸಿದ ಬಿ.ವೈ. ವಿಜೆಮದ್ರ, ಏನೇ ಸಮಸ್ಯೆ ಬಂದರೂ ನಾನು ನಿರಾಳನಾಗಿರುತ್ತೇನೆ.
ಸಮಸ್ಯೆಗೆ ಉತ್ತರ ಏನು ಎನ್ನುವುದು ನನಗೆ ಗೊತ್ತಿದೆ, ಕೇಂದ್ರದ ವರಿಷ್ಠರಿಗೂ ಗೊತ್ತಿದೆ. ಎಲ್ಲ ಸಮಸ್ಯೆಗಳಿಗೂ ಕೇಂದ್ರದ ವರಿಷ್ಠರು ಒಳ್ಳೆಯ ಉತ್ತರ ನೀಡುತ್ತಾರೆ. ರಾಜ್ಯದಲ್ಲಿ ಒಳ್ಳೆಯ ರಾಜ್ಯಾಧ್ಯಕ್ಷರು ಇರುತ್ತಾರೆ ಎಂದರು.
ಸಿನಿಮಾ ಇಂಡಸ್ಟ್ರಿ ಬಗ್ಗೆ ಡಿಕೆಶಿ ಎಚ್ಚರಿಕೆ ವಿಚಾರ ಕುರಿತು ಮಾತನಾಡಿ, ಡಿ.ಕೆ.ಶಿವಕುಮಾರ್ ಹತಾಶೆಯಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಪಕ್ಷದ ಗೊಂದಲ, ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆಯಿಂದ ಈ ರೀತಿ ಮಾಡುತ್ತಿದ್ದಾರೆ. ರಾಜಣ್ಣ ಸಹಿತ ಇತರ ಸಚಿವರ ಹೇಳಿಕೆಯಿಂದ ಇದು ಅರಿವಾಗುತ್ತದೆ. ಡಿ.ಕೆ.ಶಿವಕುಮಾರ್ ವಿಚಲಿತರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹೇಳಲಾಗದ ಮಾತನ್ನು ಸಿನಿಮಾ ಇಂಡಸ್ಟ್ರಿಯವರಿಗೆ ಹೇಳಿ ಹಗೆ ತೀರಿಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಬ್ಬಾಳಿಕೆ, ದೌರ್ಜನ್ಯಕ್ಕೆ ಅವಕಾಶ ಇಲ್ಲ ಎಂದರು.
ಶೀಘ್ರ ಡಿಕೆಶಿ ಸಿಎಂ!
ಡಿ.ಕೆ ಶಿವಕುಮಾರ್ ಇಶಾ ಫೌಂಡೇಶನ್‌ನಲ್ಲಿ ಗೃಹ ಸಚಿವರೊಂದಿಗೆ ವೇದಿಕೆ ಹಂಚಿಕೊಂಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಕಾಗಿಲ್ಲ. ಆಡಳಿತ ಪಕ್ಷದಲ್ಲಿ ಸಿಎಂ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಮುಂಬರುವ ದಿನಗಳಲ್ಲಿ ಎಲ್ಲವನ್ನೂ ಕಾದು ನೋಡುತ್ತಿರಿ.
ಡಿಸೆಂಬರ್‌ನಲ್ಲಿ ಡಿಕೆಶಿ ಸಿಎಂ ಎಂಬ ಕಾಂಗ್ರೆಸ್ ಶಾಸಕ ಹೇಳಿಕೆ ವಿಚಾರ ಕುರಿತು ಮಾತನಾಡಿ, ಮೂರು ತಿಂಗಳು ತಡವಾಗಿ ಹೇಳಿದ್ದಾರೆ. ಇನ್ನೂ ಮುಂಚಿತವಾಗಿಯೇ ಆಗುತ್ತದೆ ಎಂದರು.