
ನಮ್ಮ ಜಾನಪದ ಸಂಸ್ಕೃತಿ, ಸಂಪ್ರದಾಯಗಳನ್ನು ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದಾಗ ಸಂಸ್ಕೃತಿ ಉಳಿಸಲು ಸಾಧ್ಯ: ಪ್ರೊ. ಕವಿತಾ ಕೆ.ಆರ್.
Saturday, March 15, 2025
ಮಂಗಳೂರು: ನಮ್ಮ ಜಾನಪದ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಂಡಲ್ಲಿ ಅದನ್ನು ಉಳಿಸಿಕೊಂಡು ಹೋಗಲು ಸಾಧ್ಯ. ಕಾಲೇಜುಗಳಲ್ಲಿ ಜಾನಪದ ಕುರಿತಾದ ಕಾರ್ಯಕ್ರಮಗಳು ಈ ದೃಷ್ಟಿಯಲ್ಲಿ ಮಹತ್ವ ಪಡೆದಿವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಪ್ರೊ. ಕವಿತಾ ಕೆ.ಆರ್. ಹೇಳಿದರು.
ಅವರು ಶನಿವಾರ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಏರ್ಪಡಿಸಲಾಗಿದ್ದ ‘ಜಾನಪದ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಪರಿಕರಗಳು ಮತ್ತು ತಿಂಡಿ ತಿನಿಸುಗಳ ಸಂಗ್ರಹ ಹಾಗೂ ಪ್ರದರ್ಶನದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕರಾವಳಿ, ಕೇರಳ, ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತ ಶೈಲಿಯ ಜಾನಪದ ಆಹಾರ ಮತ್ತು ಪಾನೀಯಗಳು ಹಾಗೂ ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ವೈವಿಧ್ಯಮಯ ಸಾಮಾಗ್ರಿಗಳನ್ನು ಪ್ರದರ್ಶಿಸಲಾಗಿತ್ತು. ವಿದ್ಯಾರ್ಥಿಗಳು ವೈವಿಧ್ಯಮಯ ಜಾನಪದ ಹಾಗೂ ಸಾಂಪ್ರದಾಯಿಕ ವಸ್ತ್ರಗಳನ್ನು ಧರಿಸಿ ಸಂಭ್ರಮಿಸಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕ ದೇವಿ ಪ್ರಸಾದ್, ಸಾಂಸ್ಕೃತಿಕ ವೇದಿಕೆ ಸಂಯೋಜಕರುಗಳಾದ ಡಾ. ಕೃಷ್ಣಪ್ರಭ, ಡಾ. ಜ್ಯೋತಿಪ್ರಿಯಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುಗ್ಗಪ್ಪ ಕಜೆಕಾರ್ ಉಪಸ್ಥಿತರಿದ್ದರು. ಮಂಗಳೂರು ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕಿ ಜೀವಿತಾ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಶಾಂತಿ ತೀರ್ಪುಗಾರರಾಗಿ ಸಹಕರಿಸಿದರು.