
ಖಂಡೇವು ನದಿ ನೀರು ಕಲುಷಿತ: ಕ್ರಮಕ್ಕೆ ಒತ್ತಾಯ
ಮಂಗಳೂರು: ಇತಿಹಾಸ ಪ್ರಸಿದ್ಧ ಖಂಡೇವು ನಂದಿನಿ ನದಿಗೆ ಸಮೀಪದ ಮೆಡಿಕಲ್ ಕಾಲೇಜು ಹಾಗೂ ಪಾಲಿಕೆಯ ಚೇಳ್ಯಾರು ತ್ಯಾಜ್ಯ ಘಟಕದಿಂದ ಒಳಚರಂಡಿ ನೀರು ಸೇರುತ್ತಿದ್ದು, ನೀರು ಕಲುಷಿತಗೊಂಡು ಕಪ್ಪು ಬಣ್ಣಕ್ಕೆ ತಿರುಗಿದೆ. ಇದರ ವಿರುದ್ಧ ಸ್ಥಳೀಯರು ಮಾ. ೪ರಂದು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಈ ಬಗ್ಗೆ ತಕ್ಷಣ ಕ್ರಮ ವಹಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಆಗ್ರಹಿಸಿದ್ದಾರೆ.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ದಿಶಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ನದಿಗೆ ತ್ಯಾಜ್ಯ ನೀರು ಸೇರುತ್ತಿರುವ ಬಗ್ಗೆ ಸಂಬಂಧಪಟ್ಟಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ನದಿ ಕಲುಷಿತಗೊಂಡ ಕಾರಣ ಇಲ್ಲಿ ಹಿಂದಿನಿಂದಲೂ ನದಿಗೆ ಇಳಿದು ಮೀನು ಹಿಡಿಯುವ ಸಂಪ್ರದಾಯವನ್ನು ಕಳೆದ ಕೆಲ ವರ್ಷಗಳಿಂದ ಮಾಡಲಾಗುತ್ತಿಲ್ಲ. ಪರಿಸರ ಮಾಲಿನ್ಯ ನಿಯಂತ್ರಮ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರೂ ಕ್ರಮವಾಗಿಲ್ಲ ಎಂದು ದೂರಿದರು.
ಮನಪಾ ಆಯುಕ್ತ ರವಿಚಂದ್ರ ನಾಯಕ್ ಮಾತನಾಡಿ, ಮನಪಾ ತ್ಯಾಜ್ಯ ಘಟಕದಿಂದ ಸಂಸ್ಕರಣೆ ಮಾಡಲಾದ ನೀರನ್ನು ಮಾತ್ರವೇ ಬಿಡಲಾಗುತ್ತಿದೆ. ಯಾವುದೇ ರೀತಿಯ ಉಲ್ಲಂಘನೆಯೂ ಮನಪಾದಿಂದ ಆಗಿಲ್ಲ ಎಂದರು.
ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯ ಅಪಾರ್ಚ್ಮೆಂಟ್ಗಳಿಂದ ತ್ಯಾಜ್ಯ ನೀರು ಬಿಡುತ್ತಿರುವುದು ಕಂಡು ಬಂದಿದೆ. ಮನಪಾ ಹಾಗೂ ಕಾಲೇಜಿನಿಂದ ಸಂಸ್ಕರಣೆ ನೀರು ಬಿಡಲಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಹೇಳಿದಾಗ, ಅಸಮಾಧಾನಗೊಂಡ ಶಾಸಕ ಉಮಾನಾಥ ಕೋಟ್ಯಾನ್, ನದಿ ನೋಡುವಾಗಲೇ ಅದು ಎಷ್ಟುಪರಿಶುದ್ಧ ಎಂದು ತಿಳಿಯುತ್ತದೆ. ಶುದ್ಧವಾಗಿದ್ದರೆ ಒಂದು ಲೋಟ ನೀರನ್ನು ಕುಡಿದು ತೋರಿಸಿ ಎಂದು ಸವಾಲೆಸೆದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರತಿಕ್ರಿಯಿಸಿ, ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ಮನಪಾ ಅಧಿಕಾರಿಗಳು ಸೇರಿದಂತೆ ಎಸ್‌ಟಿಪಿ ಕಾಲೇಜು ಹಾಗೂ ಅಪಾರ್ಚ್ಮೆಂಟ್ನಿಂದ ಬಿಡಲಾಗುವ ನೀರಿನ ಬಗ್ಗೆ ಜಂಟಿ ಪರಿಶೀಲನೆ ನಡೆಸಿ ತಕ್ಷಣ ವರದಿ ನೀಡುವಂತೆ ಸೂಚನೆ ನೀಡಿದರು.
ಶಾಸಕ ಹರೀಶ್ ಪೂಂಜಾ ಮಾತನಾಡಿ, ಗುರುವಾಯನಕೆರೆಗೂ ಸ್ಥಳೀಯ ಕಾಲೇಜಿನ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಹರಿಸಲಾಗುತ್ತಿದೆ ಎಂದು ಆರೋಪಿಸಿದಾಗ ಸಂಬಂಧಪಟ್ಟವರಿಗೆ ನೋಟೀಸು ನೀಡಿ ಕ್ರಮ ವಹಿಸುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ತಿಳಿಸಿದರು.
ಬಸ್ ಓಡಿಸಲು ಸೂಚನೆ..
ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ರೈಲನ್ನು ಸುಬ್ರಹ್ಮಣ್ಯ ರೋಡ್‌ಗೆ ವಿಸ್ತರಿಸಲಾಗಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೆಟ್ಟಣದಿಂದ ಸುಬ್ರಹ್ಮಣ್ಯ ಕ್ಷೇತ್ರದವರೆಗೆ ಬಸ್ಸು ಓಡಿಸುವಂತೆ ಸಂಸದ ಚೌಟ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.